Local News – ಪ್ರತಿ ತಿಂಗಳು ಒಂದು ಪಂಚಾಯತಿ ವ್ಯಾಪ್ತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಕಾರ್ಯಕ್ರಮ ನಡೆಸಬೇಕೆಂಬ ಸರ್ಕಾರಿ ಆದೇಶವಿಲ್ಲದೇ ಇದ್ದರೂ ಜನರ ಅನುಕೂಲಕ್ಕಾಗಿ ಕಾರ್ಯಕ್ರಮ ನಡೆಸುತ್ತಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಆದರ್ಶ ವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ತಿರುಮಣಿ ಗ್ರಾ.ಪಂಚಾಯತಿಯ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನನಗೆ ಜನರ ಸೇವೆ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇನೆ. ಸರ್ಕಾರದ ಆದೇಶವಿಲ್ಲದೇ ಇದ್ದರೂ ಸಹ ನಾನು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದ್ದೇನೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸುವುದು. ಜನರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಜನಸ್ಪಂದನಾ ಕಾರ್ಯಕ್ರಮ ಮಾಡುತ್ತಿದ್ದೇವೆ. ಜನರು ಸಹ ಇಂತಹ ಕಾರ್ಯಕ್ರಮಗಳಲ್ಲಿ ಬಂದು ತಮ್ಮ ಅಹವಾಲುಗಳನ್ನು ಸಲ್ಲಿಸಿದರೇ ಅವುಗಳನ್ನು ಬಗೆಹರಿಸುವಂತಹ ಕೆಲಸ ಮಾಡಬಹುದು. ಆದ್ದರಿಂದ ಜನರು ಈ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಸುಮಾರು 649 ಅರ್ಜಿಗಳು ಸಾರ್ವಜನಿಕರಿಂದ ಬಂದಿದೆ. ಈ ಪೈಕಿ ಬಹುತೇಕ ಅರ್ಜಿಗಳು ನಿವೇಶನ ಹಾಗೂ ಭೂಮಿ ಮಂಜೂರು ಮಾಡುವ ಸಂಬಂಧ ಬಂದಿದ್ದು, ಈ ಪೈಕಿ ಅರ್ಹ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಒಂದು ಜನಸ್ಪಂದನಾ ಸಭೆಯಲ್ಲಿ ಏನೆಲ್ಲಾ ಅರ್ಜಿಗಳು ಬಂದಿದೆ, ಅವುಗಳೆಲ್ಲವನ್ನೂ ಇತ್ಯರ್ಥಪಡಿಸುವ ತನಕ ಮತ್ತೊಂದು ಜನಸ್ಪಂದನಾ ಸಭೆ ನಡೆಸದೇ ಇರಲು ತೀರ್ಮಾನಿಸಲಾಗಿದೆ. ಜನರು ನೀಡಿದ ಅರ್ಜಿಗಳನ್ನು ತ್ವರಿತವಾಗಿ ಈಡೇರಿಸುವ ಕೆಲಸ ಮಾಡುತ್ತೇನೆ ಎಂದರು.

ಆದರ್ಶ ಶಾಲೆಯ ವಿದ್ಯಾರ್ಥಿಗಳ ಮನವಿಗೆ ಸ್ಪಂಧನೆ: ಇನ್ನೂ ಸುಮಾರು ದಿನಗಳಿಂದ ಬೀಚಗಾನಹಳ್ಳಿ ಕ್ರಾಸ್ ಬಳಿಯಿರುವ ಆದರ್ಶ ವಿದ್ಯಾಲಯಕ್ಕೆ ಹೋಗುವಂತಹ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಸಂಬಂಧ ಜನಸ್ಪಂದನಾ ಸಭೆಯಲ್ಲಿ ಶಾಸಕರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂಧಿಸಿದ ಶಾಸಕರು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳನ್ನು ಕರೆದು ಒಂದೆರೆಡು ದಿನಗಳಲ್ಲಿಯೇ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಕೆಲವು ದಿನಗಳ ಹಿಂದೆಯಷ್ಟೆ ಕಂದಾಯ ಸಚಿವರಾದ ಕೃಷ್ಣಬೈರೇಗೌಡ ರವರು, ಭೂ ಸುರಕ್ಷಾ ಯೋಜನೆಯಡಿ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗಣೀಕರಣಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈಗಾಗಲೇ ರೈತರ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳ ಗಣಕೀಕರಣ ಕೆಲಸ ನಡೆಯುತ್ತಿದೆ. ಶೀಘ್ರದಲ್ಲೇ ಈ ಪ್ರಕ್ರಿಯೆ ಮುಗಿಯಲಿದೆ. ಇದರ ಜೊತೆಗೆ ಪೋಡಿ ಮುಕ್ತ ತಾಲೂಕನ್ನಾಗಿ ಮಾಡಿ, ದುರಸ್ಥಿಯಾಗದ ಜಮೀನುಗಳನ್ನು ದುರಸ್ಥಿ ಮಾಡುವ ಕಾರ್ಯ ಸಹ ಶೀಘ್ರದಲ್ಲೇ ಮುಗಿಯಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡುವ ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿತ್ತು. ಸರ್ಕಾರದ ವಿವಿಧ ಇಲಾಖೆಗಳ ಯೋಜನೆಯಡಿಯಲ್ಲಿ ಆಯ್ಕೆಯಾದ ಪಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಈ ಸ್ವತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಈ ವೇಳೆ ತಾ.ಪಂ. ಇಒ ನಾಗಮಣಿ, ಸಿಪಿಐ ನಯಾಜ್ ಬೇಗ್, ಗ್ರಾ.ಪಂ. ಅಧ್ಯಕ್ಷೆ ಮಮತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಸಿಡಿಪಿಒ ರಫೀಕ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ಕೃಷ್ಣಮೂರ್ತಿ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ವರ್ಗ, ಗ್ರಾಪಂ ಪಿಡಿಒ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಕಡೇಹಳ್ಳಿ ಆದಿರೆಡ್ಡಿ, ಪ್ರಕಾಶ್, ಆದಿನಾರಾಯರೆಡ್ಡಿ, ಲಕ್ಷ್ಮೀನಾರಾಯಣ ಸೇರಿದಂತೆ ಹಲವರು ಹಾಜರಿದ್ದರು.