Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ನ ನಿರ್ದೇಶಕ ಚುನಾವಣೆ ಕಳೆದ ಜ.9 ರಂದು ನಡೆದಿದ್ದು, ಮೂರು ಕ್ಷೇತ್ರಗಳ ಫಲಿತಾಂಶ ಘೋಷಣೆಗೆ ಹೈಕೋರ್ಟ್ ತಡೆ ಹಿಡಿದಿತ್ತು. ಇದೀಗ ಮತ ಎಣಿಕೆಗೆ ನ್ಯಾಯಾಲಯ ಆದೇಶ ಮಾಡಿದ್ದು, ಆದೇಶದಂತೆ ಮಾ.1 ರಂದು ಮತ ಎಣಿಗೆ ನಡೆದಿದ್ದು, ನ್ಯಾಯಾಲಯದ ಮೊರೆ ಹೋಗಿದ್ದ ಮೂರು ಮಂದಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಚುನಾವಣೆಯ ಫಲಿತಾಂಶದ ಬಗ್ಗೆ ಚುನವಣಾಧಿಕಾರಿ ಪ್ರೇಮ್ ಕುಮಾರ್ ಮಾಹಿತಿ ನೀಡಿದ್ದು, ಮಾ.1 ರಂದು ನಡೆದ ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಮೂರು ಮಂದಿ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಮೂರೂ ಕ್ಷೇತ್ರಗಳ ಫಲಿತಾಂಶ ತಡೆಹಿಡಿಯಲಾಗಿತ್ತು. ಇದೀಗ ಕೋರ್ಟ್‌ನ ಆದೇಶದಂತೆ ಮತಗಳನ್ನು ಎಣಿಕೆ ಮಾಡಲಾಗಿದ್ದು, ಫಲಿತಾಂಶ ಹೊರಬಂದಿದೆ.
ಚೆಂಡೂರು ಸಾಲಗಾರರ ಕ್ಷೇತ್ರ (ಮಹಿಳಾ ಮೀಸಲು)ದಿಂದ ಸುಜಾತ ಹಾಗೂ ಆರ್. ಸುನಿತಾ ಎಂಬುವವರು ಸ್ಪರ್ಧೆ ಮಾಡಿದ್ದು, ಆರ್.ಸುನಿತರವರಿಗೆ ನ್ಯಾಯಾಲಯ ನೀಡಿರುವ ಹೆಚ್ಚುವರಿ ಮತಗಳು-27 ಹಾಗೂ ಉಪ ನಿಬಂಧಕರು ನೀಡಿರುವ ಪಟ್ಟಿಯಲ್ಲಿ 18 ಸೇರಿ 45 ಮತಗಳನ್ನು ಪಡೆದಿದ್ದು, ಸುಜಾತ ರವರು ನ್ಯಾಯಾಲಯ ನೀಡಿರುವ ಹೆಚ್ಚುವರಿ ಮತಗಳು-05, ಉಪ ನಿಬಂಧಕರು ನೀಡಿರುವ ಪಟ್ಟಿಯಲ್ಲಿ-14 ಸೇರಿ ಒಟ್ಟು-19 ಮತಗಳನ್ನು ಪಡೆದಿದ್ದಾರೆ. ಅಂತಿಮವಾಗಿ ಚೆಂಡೂರು ಕ್ಷೇತ್ರದಿಂದ ಆರ್.ಸುನಿತ 45 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದಾರೆ.

ಇನ್ನು ಬೀಚಗಾನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಪ್ರಭಾವತಿರವರಿಗೆ ನ್ಯಾಯಾಲಯದಿಂದ ಅನುಮೋದಿಸಿರುವ ಮತಗಳಲ್ಲಿ ಯಾವುದೇ ಮತ ಪಡೆದಿರುವುದಿಲ್ಲ, ಉಪ ನಿಬಂಧಕರು ನೀಡಿರುವ ಮತಗಳಲ್ಲಿ 14 ಪಡೆದಿದ್ದು, ಸರಸ್ಪತಮ್ಮರವರಿಗೆ ನ್ಯಾಯಾಲಯ ನೀಡಿರುವ ಪಟ್ಟಿಯಲ್ಲಿ 21 ಮತ್ತು ಉಪ ನಿಬಂಧಕರು ನೀಡಿರುವ ಮತಪಟ್ಟಿಯಲ್ಲಿ 12 ಸೇರಿ ಒಟ್ಟು 33 ಮತಗಳನ್ನು ಪಡೆದಿದ್ದು, ಅಂತಿಮವಾಗಿ ಸರಸ್ಪತಮ್ಮ ಜಯಗಳಿಸಿದ್ದಾರೆ.
ಇನ್ನು ಸಾಲಗಾರರಲ್ಲದ ಸಾಮಾನ್ಯಕ್ಷೇತ್ರದಲ್ಲಿ ಎಂ.ಆನಂದ್ ರವರಿಗೆ ನ್ಯಾಯಾಲಯ ನೀಡಿರುವ ಪತ ಪಟ್ಟಿಯಿಂದ 75 ಮತಗಳು ಉಪ ನಿಬಂಧಕರು ನೀಡಿರುವ ಮತ ಪಟ್ಟಿಯಿಂದ 105 ಸೇರಿ ಒಟ್ಟು 180 ಮತಗಳು ಪಡೆದಿದ್ದು, ವೈ.ಎನ್. ಪ್ರಕಾಶ್ ರವರಿಗೆ ನ್ಯಾಯಾಲಯದಿಂದ ನೀಡಿರುವ ಮತಪಟ್ಟಿಯಿಂದ 11, ಉಪನಿಬಂಧಕರು ನೀಡಿರುವ ಮತ ಪಟ್ಟಿಯಲ್ಲಿ 68 ಸೇರಿ 79 ಮತಗಳನ್ನು ಪಡೆದುಕೊಂಡಿದ್ದಾರೆ. ಅಂತಿಮವಾಗಿ ಎಂ.ಆನಂದ್ 180 ಮತಗಳನ್ನು ಪಡೆಯುವುದರ ಮೂಲಕ ಜಯಗಳಿಸಿದ್ದಾರೆಂದು ಚುನಾವಣಾಧಿಕಾರಿ ಪ್ರೇಮ್‍ಕುಮಾರ್ ತಿಳಿಸಿದ್ದಾರೆ.

ಏನಿದು ಪ್ರಕರಣ : ಬೀಚಗಾನಹಳ್ಳಿ ಮಹಿಳಾ ಮೀಸಲು ಸಾಲಗಾರರ ಕ್ಷೇತ್ರ, ಚೆಂಡೂರು ಮಹಿಳಾ ಮೀಸಲು ಸಾಲಗಾರರ ಕ್ಷೇತ್ರ ಮತ್ತು ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಗಳು ಮಾನ್ಯ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಹೆಚ್ಚುವರಿ ಮತಗಳನ್ನು ಚಲಾವಣೆ ಮಾಡಲು ಆದೇಶ ತಂದಿದ್ದರು. ಜ-9 ರಂದು ನಿರ್ದೇಶಕರ ಚುನಾವಣೆ ನಡೆದಿದ್ದು, ಈ ಮೂರು ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳ ಫಲಿತಾಂಶ ಪ್ರಕಟಿಸಲಾಗಿತ್ತು. ನಂತರ ಉಚ್ಚನ್ಯಾಯಾಲಯ ಫಲಿತಾಂಶ ತಡೆ ಹಿಡಿಯಲು ಸೂಚಿಸಿದ್ದು ಅವರ ಆದೇಶದಂತೆ ಮತ ಪೆಟ್ಟಿಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್ ನೊಂದಿಗೆ ಜಿಲ್ಲಾ ಖಜಾನೆಯಲ್ಲಿ ಇಡಲಾಗಿತ್ತು, ನಂತರ ಮಾನ್ಯ ಉಚ್ಚ ನ್ಯಾಯಾಲಯ ಮತಎಣಿಕೆ ಮಾಡುವಂತೆ ಆದೇಶ ನೀಡಿದ್ದು ಅದರಂತೆ ಶನಿವಾರ ಮತಎಣಿಕೆ ಕಾರ್ಯ ಮಾಡಲಾಯಿತು.
ಇನ್ನು ಚುನಾವಣೆ ಮುಗಿಯುತ್ತಿದ್ದಂತೆ ಅಭ್ಯರ್ಥಿಗಳ ಪರ ಮುಖಂಡರು ಪಟಾಕಿ ಸಿಡಿಸಿ ಸಹಿ ಹಂಚಿಕೆ ಮಾಡುವುದರ ಮೂಲಕ ಸಂಭ್ರಮಾಚರಣೆ ಆಚರಣೆ ಮಾಡಿದರು.