ಬಯಲು ಸೀಮೆಯ ಈ ಪ್ರದೇಶವಾದ ಈ ಭಾಗದಲ್ಲಿ ಹೈನುಗಾರಿಕೆ ಪ್ರಮುಖ ಕಸಬಾಗಿದೆ. ರೈತರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಹೈನುಗಾರರಿಗೆ ಪ್ರೋತ್ಸಾಹ ನೀಡಬೇಕು. (Local News) ಆದರೆ ಹಾಲಿನ ದರ ಕಡಿತ ಮಾಡಿರುವುದು ಸರಿಯಲ್ಲ, ಈ ಕುರಿತು ಸರ್ಕಾರದ ಗಮನಕ್ಕೂ ತಂದಿದ್ದೇನೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆ ತಾಲೂಕಿನ ಕಡೇಹಳ್ಳಿ ಗ್ರಾಮದಲ್ಲಿ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಕಟ್ಟಡ ನಿರ್ಮಾಣದ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಈ ಭಾಗದ ರೈತರು ಹೆಚ್ಚಾಗಿ ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ರೈತರೂ ಸಹ ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಇತ್ತೀಚಿಗೆ ರೈತರು ಉತ್ಪಾದಿಸುವ ಹಾಲಿಗೆ 2 ರೂ ಕಡಿತ ಮಾಡಿರುವುದು ಸರಿಯಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈ ಸಂಬಂಧ ಸರ್ಕಾರದ ಜೊತೆಗೂ ಮಾತನಾಡಿದ್ದೇನೆ. ದರ ಕಡಿತ ಮಾಡಿರುವುದು ರೈತನ ಮಗನಾಗಿ ನನಗೂ ಸಹ ಬೇಸರವಿದೆ. ಸದ್ಯ ಕಡೇಹಳ್ಳಿ ಗ್ರಾಮದಲ್ಲಿ ಎಲ್ಲರೂ ಒಂದಾಗಿ ಪಕ್ಷಬೇದವಿಲ್ಲದೇ ಒಗ್ಗಾಟ್ಟಾಗಿ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಸಂತಸದ ವಿಚಾರ.
ಸ್ಥಳೀಯ ಸಹಕಾರ ಸಂಘಗಳಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು. ಊರಿನವರೆಲ್ಲರೂ ಒಂದಾಗಿದ್ದರೇ ಅಭಿವೃದ್ದಿ ಮಾಡಲು ಸಾಧ್ಯ. ಈ ಕಟ್ಟಡ ಕಾಮಗಾರಿಗೆ ನಾನು 5 ಲಕ್ಷ ಅನುದಾನ ನೀಡುತ್ತೇನೆ. ಕಡೇಹಳ್ಳಿ ಗ್ರಾಮದಿಂದ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ವರೆಗೂ 11 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯಲಿದೆ. ಶೀಘ್ರದಲ್ಲೇ ಈ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತದೆ. ಜೊತೆಗೆ ಕಡೇಹಳ್ಳಿ ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ 1 ತಿಂಗಳೊಳಗಾಗಿ ನಿವೇಶನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡುತ್ತೇನೆ ಎಂದರು.
ಬಳಿಕ ಕಡೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಾಲಕೃಷ್ಣಾರೆಡ್ಡಿ ಮಾತನಾಡಿ, ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣ ಮಾಡಲು ನಿವೇಶನದ ಸಂಬಂಧ ಹಲವಾರು ಸಮಸ್ಯೆಗಳಿತ್ತು. ಆದರೆ ಊರಿನ ಮುಖಂಡೆರೆಲ್ಲಾ ಸೇರಿ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜೊತೆಗೆ ಶಾಸಕರು ಹಾಗೂ ಒಕ್ಕೂಟದ ವತಿಯಿಂದ ಸಹಕಾರದಿಂದ ಉತ್ತಮವಾದ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತದೆ. ಜೊತೆಗೆ ಒಕ್ಕೂಟಕ್ಕೆ ಗುಣಮಟ್ಟದ ಹಾಲನ್ನು ನಮ್ಮ ಸಂಘದ ವತಿಯಿಂದ ಪೂರೈಕೆ ಮಾಡುತ್ತೇವೆ ಎಂದರು.
ಈ ವೇಳೆ ಕೋಚಿಮುಲ್ ನಿರ್ದೇಶಕ ಆದಿನಾರಾಯಣರೆಡ್ಡಿ, ಮುಖಂಡರಾದ ಆದಿರೆಡ್ಡಿ, ಆನಂದರೆಡ್ಡಿ, ಪ್ರಕಾಶ್, ವೆಂಕಟಶಿವಾರೆಡ್ಡಿ, ಕೋಚಿಮುಲ್ ಶಿಬಿರ ಕಚೇರಿಯ ಅಧಿಕಾರಿಗಳು ಸೇರಿದಂತೆ ಗ್ರಾಮದ ಮುಖಂಡರು ಹಾಜರಿದ್ದರು.