Insta Love – ಗದಗ ಜಿಲ್ಲೆಯಲ್ಲಿ ನಡೆದ ಒಂದು ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿಯೊಬ್ಬಳಿಗೆ ಬರೋಬ್ಬರಿ 25 ಲಕ್ಷ ರೂಪಾಯಿಗಳನ್ನು ನೀಡಿದ ವ್ಯಕ್ತಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟೇ ಅಲ್ಲದೆ, ಈ ಬಗ್ಗೆ ದೂರು ನೀಡಲು ಹೋದ ಆ ವ್ಯಕ್ತಿಯನ್ನೇ ಬೆದರಿಸಿ, ಅವರಿಂದಲೇ 15 ಲಕ್ಷ ರೂಪಾಯಿಗಳನ್ನು ಬೇಡಿಕೆ ಇಟ್ಟಿರುವ ಗಂಭೀರ ಆರೋಪ ಗದಗ ಜಿಲ್ಲೆಯ ರೋಣ ಸಿಪಿಐ ಸಿದ್ದಪ್ಪ ಬೀಳಗಿ ಅವರ ಮೇಲೆ ಕೇಳಿಬಂದಿದೆ. ಗಜೇಂದ್ರಗಡದ ರಾಘವೇಂದ್ರ ಎಂಬುವವರು ಈ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Insta Love – ಸಂತ್ರಸ್ತನ ಆರೋಪಗಳೇನು?
ರಾಘವೇಂದ್ರ ಅವರು ಆರೋಪಿಸಿರುವ ಪ್ರಕಾರ, ಸಿಪಿಐ ಸಿದ್ದಪ್ಪ ಬೀಳಗಿ ಅವರು ಈಗಾಗಲೇ ಬೆದರಿಸಿ 3 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ. ಉಳಿದ ಹಣಕ್ಕಾಗಿ ನಿತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ಬಗ್ಗೆ ಗದಗ ಎಸ್ಪಿ ಕಚೇರಿಗೆ ಲಿಖಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಘವೇಂದ್ರ ಅಳಲು ತೋಡಿಕೊಂಡಿದ್ದಾರೆ. ಸದ್ಯಕ್ಕೆ ಸಿಪಿಐ ಸಿದ್ದಪ್ಪ ಬೀಳಗಿ ಅವರ ಕಿರುಕುಳದಿಂದ ರಾಘವೇಂದ್ರ ತೀವ್ರವಾಗಿ ನೊಂದಿದ್ದಾರೆ.
Insta Love – ಘಟನೆಯ ಹಿನ್ನೆಲೆ ಏನು?
ಈ ಪ್ರಕರಣದ ಮೂಲ ಇನ್‌ಸ್ಟಾಗ್ರಾಮ್‌ನಲ್ಲಿ ನಡೆದ ಪರಿಚಯ. ರಾಘವೇಂದ್ರ ರಾಠೋಡ ಅವರಿಗೆ ಓರ್ವ ಯುವತಿ ಪರಿಚಯವಾಗಿದ್ದಳು. ಈ ಪರಿಚಯವು ದಿನ ಕಳೆದಂತೆ ಪ್ರೀತಿಗೆ ತಿರುಗಿತು. ಆ ಯುವತಿ ತನ್ನ ಕಷ್ಟಗಳನ್ನು ರಾಘವೇಂದ್ರ ಅವರ ಬಳಿ ಹೇಳಿಕೊಂಡಾಗ, ಅವರು ಹಂತ ಹಂತವಾಗಿ ಸುಮಾರು 25 ಲಕ್ಷ ರೂಪಾಯಿಗಳನ್ನು ಆಕೆಗೆ ನೀಡಿದ್ದಾರೆ. ಆದರೆ, ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಆ ಯುವತಿ ನಿರಾಕರಿಸಿದ್ದಾಳೆ. ಇದರಿಂದ ಮನನೊಂದ ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ.
Insta Love – ಸಿಪಿಐ ಬೆದರಿಕೆ ಮತ್ತು ಹಲ್ಲೆ ಆರೋಪ
ಇನ್ನು ಹಣ ಪಡೆದ ಯುವತಿ ಸಿಪಿಐ ಸಿದ್ದಪ್ಪ ಬೀಳಗಿ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ಈ ವಿಷಯವಾಗಿ ದೂರು ನೀಡಲು ಹೋದ ರಾಘವೇಂದ್ರ ಅವರಿಗೆ ಸಿಪಿಐ ಬೆದರಿಕೆ ಹಾಕಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. “ನನ್ನ ಮೇಲೆ ಹಲ್ಲೆ ಮಾಡಿದ ದೃಶ್ಯ ಠಾಣೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಹಿತಿ ಹಕ್ಕಿನಡಿ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಕೇಳಿದ್ದೇನೆ” ಎಂದು ರಾಘವೇಂದ್ರ ತಿಳಿಸಿದ್ದಾರೆ. ಅಷ್ಟೇಅಲ್ಲದೇ “ನನ್ನ ಮೇಲೆ ರೇಪ್ ಕೇಸ್ ಹಾಕಿಸುವುದಾಗಿ ಸಿಪಿಐ ಬೆದರಿಕೆ ಹಾಕಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ. Read this also : Insta Love: ಇನ್ಸ್ಟಾ ಪ್ರೀತಿಗೆ ಮಾರುಹೋದ ಗೃಹಿಣಿ, ಪತಿ ಬಿಟ್ಟು ಬಂದ ಗೃಹಿಣಿ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣು…!
Insta Love – ಎಸ್ಪಿ ಅವರ ಪ್ರತಿಕ್ರಿಯೆ ಏನು?
ಈ ಘಟನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗದಗ ಎಸ್ಪಿ ಬಿಎಸ್ ನೇಮಗೌಡ ಅವರು, “ಈ ವಿಷಯದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆದರಿಕೆ ಮತ್ತು ಲಂಚ ಪಡೆದಿರುವ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಆ ಮಹಿಳೆಗೆ ನೀಡಿದ ಹಣವನ್ನು ಕೊಡಿಸುವಂತೆ ಆತ ನಮ್ಮ ಅಧಿಕಾರಿಗಳ ಹಿಂದೆ ದುಂಬಾಲು ಬಿದ್ದಿದ್ದ. ಹಣ ಕೊಡಿಸದ ಕಾರಣ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಿದ್ದಾನೆ. ಈ ಬಗ್ಗೆ ನರಗುಂದ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುವುದು. ಒಂದು ವೇಳೆ ಸಿಪಿಐ ಬೆದರಿಕೆ ಹಾಕಿ, ಲಂಚ ಪಡೆದಿದ್ದರೆ ಖಂಡಿತವಾಗಿಯೂ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.