ನಮ್ಮ ಆರೋಗ್ಯ ವ್ಯವಸ್ಥೆ ಎಷ್ಟೇ ಹೈಟೆಕ್ ಆಗಿದ್ದರೂ, ಬಡರೋಗಿಗಳ ಪಾಲಿಗೆ ಅದು ಇಂದಿಗೂ ಮರೀಚಿಕೆಯೇ ಸರಿ. ವ್ಯವಸ್ಥೆಯ ಕರಾಳ ಮುಖವನ್ನು ಜಗಜ್ಜಾಹೀರು ಮಾಡುವ ಕರುಣಾಜನಕ ದೃಶ್ಯವೊಂದು ಮಧ್ಯಪ್ರದೇಶದ ಇಂದೋರ್ನಿಂದ (Indore Hospital Incident) ವರದಿಯಾಗಿದೆ. ಆಸ್ಪತ್ರೆಯೊಂದು ಕನಿಷ್ಠ ಆಂಬ್ಯುಲೆನ್ಸ್ ಒದಗಿಸದ ಕಾರಣ, ಅಸಹಾಯಕ ಪೋಷಕರು ತಮ್ಮ ಅಸ್ವಸ್ಥ ಮಗನನ್ನು ಸ್ಟ್ರೆಚರ್ನಲ್ಲಿ ಮಲಗಿಸಿಕೊಂಡು ಧಗಧಗಿಸುವ ಬಿಸಿಲಿನಲ್ಲಿ ತಾವೇ ತಳ್ಳಿಕೊಂಡು ಹೋಗಿರುವ ವಿಡಿಯೋ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

Indore Hospital Incident – ಆಸ್ಪತ್ರೆಗಳ ನಡುವೆ 1 ಕಿ.ಮೀ ಕಾಲ್ನಡಿಗೆಯ ನರಕ!
ಇಂದೋರ್ನ ಪ್ರಖ್ಯಾತ ಮಹಾರಾಜ ಯಶ್ವಂತರಾವ್ (ಎಂ.ವೈ) ಆಸ್ಪತ್ರೆಯಲ್ಲಿ 12 ವರ್ಷದ ಆದರ್ಶ್ ಎಂಬ ಬಾಲಕ ಬೆನ್ನುಮೂಳೆಯ ಸಮಸ್ಯೆಯಿಂದ 15 ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದ. ಆತನ ಸ್ಥಿತಿಯನ್ನು ಗಮನಿಸಿದ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕಳುಹಿಸಲು ನಿರ್ಧರಿಸಿದರು.
ಆದರೆ ವಿಪರ್ಯಾಸವೆಂದರೆ, ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಸ್ಥಳಾಂತರಿಸಲು ಅಲ್ಲಿ ಒಂದು ಆಂಬ್ಯುಲೆನ್ಸ್ ಕೂಡ ಲಭ್ಯವಿರಲಿಲ್ಲ! ಬೇರೆ ದಾರಿ ಕಾಣದ ಪೋಷಕರು ತಮ್ಮ ಮಗನನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ಬರೋಬ್ಬರಿ 1 ಕಿಲೋಮೀಟರ್ ದೂರದವರೆಗೆ ಸುಡು ಬಿಸಿಲಿನಲ್ಲೇ ದೂಡಿಕೊಂಡು ಹೋಗಿದ್ದಾರೆ. Read this also : ಮಗನ ಶವವನ್ನು ತಳ್ಳುಗಾಡಿಯಲ್ಲೇ ಸಾಗಿಸಿದ ಅಸಹಾಯಕ ಪೋಷಕರು ಕರೀಂನಗರದಲ್ಲಿ ಅಮಾನವೀಯ ಘಟನೆ..!
ಒದ್ದೆ ಬಟ್ಟೆಯಲ್ಲಿ ಮಗನಿಗೆ ತಾಯಿಯ ಆರೈಕೆ
ಸದ್ಯ ವೈರಲ್ ಆಗಿರುವ ಈ ವಿಡಿಯೋ (Viral Video Here) ನೋಡಿದ ಪ್ರತಿಯೊಬ್ಬರ ಮನಕಲಕುತ್ತದೆ. ಮಧ್ಯಾಹ್ನದ ಬಿಸಿಲಿನ ಬೇಗೆಗೆ ಮಗ ಒದ್ದಾಡಬಾರದು ಎಂದು ಆತನ ತಾಯಿ, ಬಟ್ಟೆಯನ್ನು ಪದೇ ಪದೇ ನೀರಿನಲ್ಲಿ ಅದ್ದಿ ಮಗನ ಮೈ ಒರೆಸುತ್ತಾ ಆತನಿಗೆ ನೆರಳು ನೀಡಲು ಹೆಣಗಾಡಿದ್ದಾಳೆ. ತಂದೆ ಮೌನವಾಗಿ ಸ್ಟ್ರೆಚರ್ ತಳ್ಳಿಕೊಂಡು ಹೋಗಿದ್ದಾರೆ. (Indore Hospital Incident) ರೋಗಿಯನ್ನು ಕರೆದೊಯ್ಯಲು ಕನಿಷ್ಠ ಸಹಾಯ ಮಾಡಬೇಕಿದ್ದ ವಾರ್ಡ್ ಬಾಯ್ ಅಥವಾ ಅಟೆಂಡರ್ಗಳು ಯಾರೊಬ್ಬರೂ ಅವರ ಜೊತೆ ಇರಲಿಲ್ಲ ಎಂಬುದು ವ್ಯವಸ್ಥೆಯ ಅಮಾನವೀಯತೆಯನ್ನು ಎತ್ತಿ ತೋರಿಸುತ್ತದೆ.
ತನಿಖೆಯ ಭರವಸೆ ನೀಡಿದ ಆಸ್ಪತ್ರೆ ಆಡಳಿತ
ಹೊರಗುತ್ತಿಗೆ ಹಾಗೂ ನಿರ್ವಹಣೆಯ ಹೆಸರಿನಲ್ಲಿ ಕೋಟಿಗಟ್ಟಲೆ ಅನುದಾನ ಪಡೆಯುವ ಸರ್ಕಾರಿ ಆಸ್ಪತ್ರೆಗಳಲ್ಲಿ, ಒಂದು ತುರ್ತು ವಾಹನವೂ ಇಲ್ಲದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಘಟನೆ (Indore Hospital Incident) ವಿವಾದಕ್ಕೀಡಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಎಂ.ವೈ. ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಅಶೋಕ್ ಯಾದವ್, “ಆಂಬ್ಯುಲೆನ್ಸ್ ಕೊರತೆಯಿಂದಾಗಿ ಸ್ಟ್ರೆಚರ್ನಲ್ಲಿ ರೋಗಿಯನ್ನು ಕರೆದೊಯ್ದ ಘಟನೆ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.

ಸುಧಾರಿಸದ ಆಸ್ಪತ್ರೆಯ ದುಸ್ಥಿತಿ
ಎಂ.ವೈ ಆಸ್ಪತ್ರೆಯಲ್ಲಿ ರೋಗಿಗಳು ಮತ್ತು ಅವರ ಸಂಬಂಧಿಕರು ಇಂಥ ನರಕಯಾತನೆ ಅನುಭವಿಸುತ್ತಿರುವುದು ಇದೇ ಮೊದಲೇನಲ್ಲ. ಇದೇ ವರ್ಷದ ಮಾರ್ಚ್ ತಿಂಗಳಲ್ಲೂ ಕೂಡ (Indore Hospital Incident) ರೋಗಿಗಳನ್ನು ವೀಲ್ ಚೇರ್ ಹಾಗೂ ಸ್ಟ್ರೆಚರ್ಗಳಲ್ಲಿ ಸಂಬಂಧಿಕರೇ ಆಸ್ಪತ್ರೆಯೊಳಗೆ ಅಲೆದಾಡಿಸುತ್ತಿದ್ದ ದೃಶ್ಯಗಳು ಬಯಲಾಗಿದ್ದವು. ಪದೇ ಪದೇ ಇಂತಹ ತಪ್ಪುಗಳು ಮರುಕಳಿಸುತ್ತಿದ್ದರೂ ಎಚ್ಚೆತ್ತುಕೊಳ್ಳದ ಆಡಳಿತ ಮಂಡಳಿಯ ವಿರುದ್ಧ ಈಗ ಜನಾಕ್ರೋಶ ಭುಗಿಲೆದ್ದಿದೆ. ಕನಿಷ್ಠ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
