ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಬಹುಮುಖ್ಯ ಬೇಡಿಕೆಯಾದ 7ನೇ ವೇತನ ಆಯೋಗ (7th Pay commission) ಜಾರಿಯಾಗದೇ ಇದ್ದರೇ ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ. ಸದ್ಯ ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ನೌಕರ ವೇತನ ಪರಿಷ್ಕರಣೆ ಅಸಾಧ್ಯ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರತಿಭಟನೆಯ ಮೂಲಕ ಶಾಕ್ ಕೊಡಲು ಮುಂದಾಗಿದ್ದು, ವೇತನ ಆಯೋಗ ಜಾರಿ ಸೇರಿದಂತೆ ಇತರೆ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯ ಸರ್ಕಾರದ ವಿರುದ್ದ ಮೂರು ಹಂತದಲ್ಲಿ ಪ್ರತಿಭಟನೆ ನಡೆಸಲು ನೌಕರರ ಸಂಘ ಸಭೆಯಲ್ಲಿ ತೀರ್ಮಾನ ಮಾಡಿದೆ. 7 ನೇ ವೇತನ ಜಾರಿ (7th Pay commission), ಸಂಜೀವಿನಿ ಯೋಜನೆ ಜಾರಿ, NPS ರದ್ದು ಮಾಡಿ OPS ಜಾರಿ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಜುಲೈ ತಿಂಗಳಲ್ಲೇ ಪ್ರತಿಭಟನೆ ಶುರುವಾಗಬಹುದು ಎಂದು ಹೇಳಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇಡಿಕೆ ಈಡೇರಿಸುವಂತೆ ಮನವಿ ಪತ್ರ ಸಲ್ಲಿಸುವ ಮೂಲಕ ಮೊದಲ ಹಂತದ ಪ್ರತಿಭಟನೆ ಆರಂಭವಾಗಲಿದೆ. ಇನ್ನೂ ಜುಲೈ ಕೊನೆಯ ಅಥವಾ ಆಗಸ್ಟ್ ಮೊದಲ ವಾರದಿಂದ ಕೆಲಸಕ್ಕೆ ಗೈರಾಗಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನೂ ಈ ಕುರಿತು ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, 7ನೇ ವೇತನ ಆಯೋಗ (7th Pay commission) ವರದಿ ಯಥಾವತ್ತಾಗಿ ಜಾರಿಮಾಡಬೇಕು. ಸಿಎಂ ಸಿದ್ದರಾಮಯ್ಯನವರು ಚುನಾವಣೆ ಮುಗಿದ ಬಳಿಕ 7ನೇ ವೇತನ ಆಯೋಗ (7th Pay commission) ಜಾರಿ ಮಾಡುವುದಾಗಿ ಹೇಳಿದ್ದರು. ಬಳಿಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಸಮ್ಮೇಳನದಲ್ಲೂ ಭರವಸೆ ನೀಡಿದ್ದರು. ಆದರೆ 7ನೇ ವೇತನ ಆಯೋಗ ಜಾರಿಯಾಗದ ಹಿನ್ನೆಲೆಯಲ್ಲಿ ನಾವೆಲ್ಲಾ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನ ತೆಗೆದುಕೊಂಡಿದ್ದೇವೆ. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ರಚಿಸಿದ್ದ ನಿವೃತ್ತ ಮುಖ್ಯಕಾರ್ಯದರ್ಶಿ ಕೆ. ಸುಧಾಕರ್ ರಾವ್ ಅವರ ನೇತೃತ್ವದ ಆಯೋಗ 244 ಪುಟಗಳ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತ್ತು. ಶಿಫಾರಸ್ಸು ಮಾಡಿದ ದಿನದಿಂದಲೇ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಆರಂಭವಾಗಿತ್ತು. ಇದೀಗ ನೀತಿ ಸಂಹಿತೆ ಮುಗಿದು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸರ್ಕಾರಿ ನೌಕರರ ಆರೋಪವಾಗಿದೆ. ಸರ್ಕಾರಿ ನೌಕರರ ಮನವಿಗೆ ಸರ್ಕಾರ ಸ್ಪಂಧಿಸದೇ ಇದ್ದರೇ ರಾಜ್ಯದಲ್ಲಿ ಆಡಳಿತ ಯಂತ್ರಾಂಗ ಅಸ್ತವ್ಯಸ್ಥವಾಗಬಹುದು ಎಂದು ಹೇಳಲಾಗುತ್ತಿದೆ.