Hemareddy Mallamma – 14ನೇ ಶತಮಾನದಲ್ಲಿ ಮೂಡನಂಬಿಕೆಗಳು ಮತ್ತು ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ಸಮಾಜವನ್ನು ತಿದ್ದುವಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಪಾತ್ರ ಮಹತ್ವದ್ದು ಎಂದು ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ ಅವರು ಅಭಿಪ್ರಾಯಪಟ್ಟರು. ಚಿಕ್ಕಬಳ್ಳಾಪುರ ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲ್ಲೂಕು ಆಡಳಿತ ಮತ್ತು ಬೈರೇಗೌಡ ಒಕ್ಕಲಿಗರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
Hemareddy Mallamma – ಸರಳತೆ ಮತ್ತು ದಿಟ್ಟತನದ ಪ್ರತೀಕ
ಪರಿಮಳ ಅವರು ಮಾತನಾಡಿ, “ಹೇಮರೆಡ್ಡಿ ಮಲ್ಲಮ್ಮನವರು ತಮ್ಮ ಸರಳ ಹಾಗೂ ದಿಟ್ಟ ಭಕ್ತಿಯಿಂದ ದೈವತ್ವವನ್ನು ಕಂಡ ಮಹಾನ್ ಶರಣೆ. 14ನೇ ಶತಮಾನದ ಶರಣರ ಕ್ರಾಂತಿಯಲ್ಲಿ ಅವರ ಪಾತ್ರ ಪ್ರಮುಖವಾದದ್ದು. ಅವರು ಸಾಮಾಜಿಕ ಸುಧಾರಣೆಗೆ ಮಾದರಿಯಾಗಿದ್ದಾರೆ. ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನವರು ಸಾಕ್ಷಾತ್ ಶಿವನನ್ನೇ ಒಲಿಸಿಕೊಂಡವರು. ತಮ್ಮ ಹಲವಾರು ವಚನಗಳ ಮೂಲಕ ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬ ಮಹಿಳೆಯೂ ಮಲ್ಲಮ್ಮನವರ ಆದರ್ಶಗಳನ್ನು ಪಾಲಿಸಬೇಕು” ಎಂದು ಕರೆ ನೀಡಿದರು.
Hemareddy Mallamma – ಹೇಮರೆಡ್ಡಿ ಮಲ್ಲಮ್ಮ ಕೇವಲ ಒಂದು ಜಾತಿಗೆ ಸೀಮಿತರಲ್ಲ: ಕೆ.ವಿ.ನಾರಾಯಣಸ್ವಾಮಿ
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, “ದಾನ, ದಾಸೋಹ ಮತ್ತು ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ಅವರು ಮೋಕ್ಷದ ಮಾರ್ಗವನ್ನು ತೋರಿಸಿದ ಮಹಾನ್ ಸಾಧ್ವಿ. ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸಬಾರದು. ಅವರ ವಿಚಾರಗಳು ಮತ್ತು ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಆದರ್ಶಪ್ರಾಯರಾಗಬೇಕು. ಸರ್ಕಾರ ಮಹನೀಯರ ಜಯಂತಿಗಳನ್ನು ಆಚರಿಸುವುದು ಸಹ ಇದೇ ಉದ್ದೇಶಕ್ಕಾಗಿಯೇ” ಎಂದು ಹೇಳಿದರು.
Hemareddy Mallamma – ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಒಕ್ಕಲಿಗ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಿಇಒ ಕೃಷ್ಣಕುಮಾರಿ, ತಹಸೀಲ್ದಾರ್ ಸಿಗ್ಬತ್ತುಲ್ಲಾ ಮತ್ತು ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥರೆಡ್ಡಿ ಅವರು ಸಹ ಹೇಮರೆಡ್ಡಿ ಮಲ್ಲಮ್ಮನವರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
Read this also : ಶನಿ ಸಾಡೇಸಾತಿಯಿಂದ ಮುಕ್ತಿ ಪಡೆಯಲು ಶನಿವಾರದ ಪರಿಹಾರಗಳನ್ನು ಅನುಸರಿಸಿ…!
ಕಾರ್ಯಕ್ರಮದಲ್ಲಿ ಪಪಂ ಅಧ್ಯಕ್ಷ ವಿಕಾಸ್, ಕೃಷಿ ಇಲಾಖೆಯ ಕೇಶವರೆಡ್ಡಿ, ನೌಕರರ ಸಂಘದ ಮುನಿಕೃಷ್ಣಪ್ಪ, ಸಂಘದ ಕಾರ್ಯದರ್ಶಿ ಪಯ್ಯೂರು ವೇಣುಗೋಪಾಲ್, ಮುಖಂಡರಾದ ಪಾವಜೇನಹಳ್ಳಿ ನಾಗರಾಜರೆಡ್ಡಿ, ಆದಿರೆಡ್ಡಿ, ಪ್ರಕಾಶ್, ಗಂಗಿರೆಡ್ಡಿ, ಶಿವಣ್ಣ ಸೇರಿದಂತೆ ಒಕ್ಕಲಿಗ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.