ಕರ್ನಾಟಕ ರಾಜ್ಯದ ಕೆಲವೊಂದು ಭಾಗಗಳಲ್ಲಿ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ಇದು ಮುಂಗಾರು ಆರಂಭದ ಸುಳಿವು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರಿ ಮಳೆ ಹಾಗೂ ಮಳೆ ಸಂಬಂಧಿತ ಹಾನಿಯುಂಟಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆ ಮಾಹಿತಿಯ ಮೇರೆಗೆ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಕಂದಾಯ ಇಲಾಖೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
ಕರ್ನಾಟಕದಲ್ಲಿ ಮುಂದೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತಗ್ಗು ಪ್ರದೇಶಗಳನ್ನು ಗುರುತಿಸಲು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಭೆಗಳನ್ನು ನಡೆಸಲು, ಅಣೆಕಟ್ಟುಗಳ ಸಮೀಪವಿರುವಂತಹ ನಿವಾಸಿಗಳನ್ನು ಎಚ್ಚರಿಸಲು ಎಲ್ಲಾ ಅಗತ್ಯ ಸಿದ್ದತೆಗಳನ್ನ ಮಾಡಿಕೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಈ ವರ್ಷ ದೇಶದಾದ್ಯಂತ ಶೇ.104 ರಷ್ಟು ಮಳೆಯಾಗುವ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕರ್ನಾಟಕದಲ್ಲೂ ಇದೆ ಎನ್ನಲಾಗಿದೆ. ಭಾರಿ ಮಳೆಯ ಕಾರಣದಿಂದ ಯಾವುದೇ ಅನಾಹುತ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಂದಾಯ ಇಲಾಖೆಯ ಅಧೀನದಲ್ಲಿ ಬರುವಂತಹ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸುತ್ತೋಲೆ ಹೊರಡಿಸಿದೆ.
ಇನ್ನೂ ಮಳೆಯಿಂದಾಗಿ ಹಾನಿಗೊಳಗಾದ ಬೆಳೆಗಳಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಜಾನುವಾರಗಳಿಗಾಗಿ ಗೋಶಾಲೆ ಆರಂಭಿಸಬೇಕೆಂದು ಮೈಸೂರು-ಊಟಿ ರಸ್ತೆ ತಡೆದು ರೈತ ಸಂಘದ ವತಿಯಿಂದ ಪ್ರತಿಭಟನೆ ಸಹ ನಡೆಸಲಾಗಿದೆ. ರೈತರು ಬಾಳೆ, ದ್ರಾಕ್ಷಿ ಸೇರಿದಂತೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು. ರೈತರ ನಷ್ಟವನ್ನು ಸರ್ಕಾರ ಭರಿಸಿಕೊಡಬೇಕು. ವಿಶೇಷ ಪ್ಯಾಕೇಜ್ ಸಹ ಘೋಷಣೆ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಇನ್ನೂ ಮೈಸೂರು ತಾಲೂಕಿನ ಹಲವು ಕಡೆ ಗಾಳಿ ಮಳೆಯಿಂದಾಗಿ ನೂರಾರು ಎಕರೆ ಬಾಳೆ ತೋಟ ನಾಶವಾಗಿದೆ. ಚಾಮರಾಜನಗರದಲ್ಲಿಯೂ ಎಕರೆಗಟ್ಟಲೇ ಬಾಳೆ ತೋಟ ನಾಶವಾಗಿತ್ತು. ಇಂದು (ಮೇ.7) ಚಿಕ್ಕಮಗಳೂರಿನಲ್ಲಿ ಮದ್ಯಾಹ್ನವೇ ಗುಡುಗು ಮಿಂಚು ಸಮೇತ ಭಾರಿ ಮಳೆಯಾಗಿದೆ.