ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಸಿಎಂ ಚರ್ಚೆ ದಿನಕ್ಕೊಂದು ರೀತಿಯಲ್ಲಿ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರ ವಿರುದ್ದ ಕೇಳಿಬಂದ ಮುಡಾ ಹಗರಣದ ತನಿಖೆ ಸಹ ಜೋರಾಗಿದೆ. ಈಗಾಗಲೇ ED ಸಹ ಮುಡಾ ಪ್ರಕರಣದ ತನಿಖೆ ಚುರುಕುಗೊಳಿಸಿದೆ. ಈ ನಡುವೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಈ ಸರ್ಕಾರ 2028ರವರೆಗೂ ಇರೊಲ್ಲ, ಮತ್ತೆ ನಾನೇ ಸಿಎಂ ಆಗ್ತೀನಿ, ಜನರು ಒಂದು ಅವಕಾಶ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮಂಡ್ಯ ನಗರದಲ್ಲಿ ನಡೆದ “ಮಂಡ್ಯ ಟು ಇಂಡಿಯಾ” (Mandya To India) ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. 2028ರ ವರೆಗೆ ಈ ಸರ್ಕಾರ ನಡೆಯಲ್ಲ. ಅಷ್ಟರೊಳಗೆ ನನಗೆ ಅವಕಾಶ ಬರುತ್ತೆ, ಮತ್ತೆ ನಾನೇ ಸಿಎಂ ಆಗ್ತೀನಿ ನಾನು ಜ್ಯೋತಿಷಿ ಅಲ್ಲ ಆದ್ರೂ ಹೇಳ್ತಿದ್ದಿನಿ. ಮತ್ತೆ ಸಿಎಂ ಆಗುವ ವಿಚಾರ ಜನ ತೀರ್ಮಾನ ಮಾಡ್ತಾರೆ ಅನ್ನೋ ವಿಶ್ವಾಸದಲ್ಲಿದ್ದೇನೆ. ಜನ ಬಯಸಿದರೆ ಏಕೆ ಆಗಬಾರದು? 5 ವರ್ಷ ಸರ್ಕಾರ ನಡೆಸಲು ನನಗೆ ಅವಕಾಶ ಮಾಡಿಕೊಡಿ ಅಂತ ಜನರಿಗೆ ಈಗಲೂ ಮನವಿ ಮಾಡುತ್ತೇನೆ. ಈ ಹಿಂದಿನ ಅವಧಿಯಲ್ಲಿ 14 ತಿಂಗಳ ಕಾಲ ಸಿಎಂ ಆಗಿ ಬೇರೆಯವರ ಹಂಗಿನಲ್ಲಿ ಮಾಡಿದ್ದೇನೆ. ಈಗಿನ ಸಂಪೂರ್ಣ ಬಹುಮತದ ಸರ್ಕಾರ ಯಾವ ರೀತಿ ಆಡಳಿತ ನಡೆಸುತ್ತಿದ್ದಾರೆ ಜನರಿಗೆ ಗೊತ್ತಿದೆ. ನಾನು ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲೂ ನಾನು ಮಾಡಿದಂತಹ ಅಭಿವೃದ್ದಿ ಕಾರ್ಯಕ್ರಮಗಳು ಜನರಲ್ಲಿ ಬೇರೂರಿದೆ. ಐದು ವರ್ಷಗಳ ಕಾಲ ನನಗೆ ಒಂದು ಬಾರಿ ಅವಕಾಶ ಸಿಕ್ಕರೇ ರಾಜ್ಯವನ್ನು ಅಭಿವೃದ್ದಿಯತ್ತ ಕೊಂಡೊಯ್ಯುತ್ತೇನೆ ಎಂದರು.
ಕರ್ನಾಟಕ ಸಮೃದ್ದಿಯ ನಾಡು, ಇಲ್ಲಿ ಹಣದ ಕೊರತೆಯಿಲ್ಲ. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯವಿದು. ಆದರೆ ಇಂದು ಹಣ ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಕಾಂಗ್ರೇಸ್ ನವರು ಕೊಡುವ 2 ಸಾವಿರ ರುಪಾಯಿ ಅಲ್ಲ. ಕನಿಷ್ಟ 10 ಸಾವಿರ ಸಂಪಾದನೆ ಮಾಡುವಂತಹ ಅನೇಕ ಕಾರ್ಯಕ್ರಮಗಳೂ ಸಹ ಇದೆ. ಜನರು ಒಂದು ಅವಕಾಶ ನೀಡುತ್ತಾರೆ ಎಂಬ ದೃಢ ವಿಶ್ವಾಸ ನನಗಿದೆ. 2028 ರೊಳಗೆ ನನಗೆ ಅವಕಾಶ ಬಂದೇ ಬರುತ್ತದೆ ಎಂದು ಹೆಚ್.ಡಿ.ಕೆ ಸಿಎಂ ಆಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.