Saalumarada Thimmakka – ಸ್ವಾರ್ಥವಿಲ್ಲದ ಪ್ರೀತಿ, ಆಸೆಯಿಲ್ಲದ ಸೇವೆ. ಈ ಎರಡರ ಸಾರವೇ ವೃಕ್ಷಮಾತೆ ದಿವಂಗತ ಸಾಲುಮರದ ತಿಮ್ಮಕ್ಕ. ಬಡತನದಲ್ಲಿ ಹುಟ್ಟಿದರೂ, ಪರಿಸರ ಸಂರಕ್ಷಣೆಯ ತಮ್ಮ ಬೃಹತ್ ಕಾರ್ಯದಿಂದ ಕೋಟ್ಯಂತರ ಜೀವಿಗಳ ಪಾಲಿಗೆ ಆಸರೆಯಾದ ತಿಮ್ಮಕ್ಕನವರ ಕೊಡುಗೆ ಅಪಾರ ಎಂದು ರಾಜ್ಯ ಪ್ರಶಸ್ತಿ ವಿಜೇತ ಗುಂಪು ಮರದ ಆನಂದ್ ಅವರು ಬಣ್ಣಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ಅಂಬೇಡ್ಕರ್ ವೃತ್ತದ ಬಳಿ ಗುಡಿಬಂಡೆ ಸಾರ್ವಜನಿಕರು ಆಯೋಜಿಸಿದ್ದ ತಿಮ್ಮಕ್ಕನವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

Saalumarada Thimmakka – 8 ಸಾವಿರಕ್ಕೂ ಹೆಚ್ಚು ಮರ, ಕೋಟ್ಯಂತರ ಪ್ರಾಣಿ ಸಂಕುಲಕ್ಕೆ ಆಸರೆ
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಬಡತನದಲ್ಲಿ ಹುಟ್ಟಿದ್ದರೂ ಸಹ ದೊಡ್ಡ ಮಟ್ಟದಲ್ಲಿ ಪರಿಸರ ಸೇವೆ ಮಾಡಿದ್ದಾರೆ. ಯಾವುದೇ ಆಸೆಯಿಲ್ಲದೇ ಸಸಿಗಳನ್ನು ನೆಟ್ಟು ಪೋಷಣೆ ಮಾಡಿ ಕೋಟ್ಯಂತರ ಪ್ರಾಣಿ ಸಂಕುಲಕ್ಕೆ ನೆರವಾಗಿದ್ದಾರೆ. ಅವರು ತಮ್ಮ ಜೀವನ ಪರ್ಯಂತ ಪರಿಸರ ಸಂರಕ್ಷಣೆಗೆ ಮೀಸಲಿಟ್ಟಿದ್ದಾರೆ. ಅವರು ಇಂದು ನಮ್ಮನ್ನ ಅಗಲಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಅವರ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಿದೆ. ಅವರ ಮಾದರಿಯಲ್ಲೆ ಪರಿಸರವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕಿದೆ. ವಿಶ್ವ ಪರಿಸರ ದಿನವನ್ನು ಆಚರಣೆ ಮಾಡುವಂತೆ ಸಾಲು ಮರದ ತಿಮ್ಮಕ್ಕನವರ ಜಯಂತಿಯನ್ನು ಸಹ ಆಚರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ಮನವಿ ಮಾಡಿದರು.
Saalumarada Thimmakka – ತಿಮ್ಮಕ್ಕ ಶ್ರೀಮಂತ ಮನಸ್ಸಿನ ಮಹಾತಾಯಿ: ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ
ಬಳಿಕ ನಿವೃತ್ತ ಶಿಕ್ಷಕ ಎನ್.ನಾರಾಯಣಸ್ವಾಮಿ ಮಾತನಾಡಿ, ದಿವಂಗತ ಸಾಲು ಮರದ ತಿಮ್ಮಕ್ಕ ಕಡು ಬಡತನದಲ್ಲಿ ಹುಟ್ಟಿದರೂ ಸಹ ಅವರ ಮನಸ್ಸು ಶ್ರೀಮಂತವಾದುದು. ಇಂದಿನ ಕಾಲದಲ್ಲಿ ಬಹುತೇಕ ಎಲ್ಲರೂ ಸ್ವಾರ್ಥ ಮನೋಭಾವನೆಯನ್ನು ಹೊಂದಿರುತ್ತಾರೆ. ಆದರೆ ತಿಮ್ಮಕ್ಕನವರು ಮಾತ್ರ ತನಗೆ ಮಕ್ಕಳಿಲ್ಲದೇ ಇದ್ದರೂ ತಾನು ನೆಟ್ಟ ಮರಗಳನ್ನೇ ಮಕ್ಕಳಂತೆ ಸಾಕಿ ಸಲುಹಿದ್ದಾರೆ.

ಅವರು ನೆಟ್ಟ ಮರಗಳು ಇಂದು ಅನೇಕರಿಗೆ ಆಸರೆಯಾಗಿದೆ. ಈಗಾಗಲೇ ಪರಿಸರದ ಅಸಮತೋಲನದ ಕಾರಣದಿಂದ ಪ್ರವಾಹಗಳು, ಅತಿವೃಷ್ಟಿ, ಅನಾವೃಷ್ಟಿಯಂತಹ ಅವಘಡಗಳು ನಡೆದು ಅಪಾರ ಸಾವುನೋವು ಉಂಟಾಗುತ್ತದೆ. ಇದಕ್ಕೆಲ್ಲಾ ಇರುವುದು ಒಂದೇ ಪರಿಹಾರ ಅದು ಸಾಲು ಮರದ ತಿಮ್ಮಕ್ಕನಂತವರು ಊರಿಗೆ ಒಬ್ಬರು ಹುಟ್ಟಬೇಕು ಎಂದರು. Read this also : ‘ವೃಕ್ಷಮಾತೆ’ ಸಾಲುಮರದ ತಿಮ್ಮಕ್ಕ ಇನ್ನಿಲ್ಲ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭಾವುಕ ಪೋಸ್ಟ್!
Saalumarada Thimmakka – ಸಭೆಯಲ್ಲಿ ಭಾಗವಹಿಸಿದ ಗಣ್ಯರು
ಈ ಶ್ರದ್ದಾಂಜಲಿ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿಯ ಜಿ.ವಿ.ಗಂಗಪ್ಪ, ಕಸಾಪ ಅಧ್ಯಕ್ಷ ಬಿ.ಮಂಜುನಾಥ್, ನ್ಯೂ ವಿಷನ್ ಶಾಲೆಯ ಮುಖ್ಯಸ್ಥೆ ಡಿ.ಎಲ್.ಪರಿಮಳ, ಕರುನಾಡ ಸಾಹಿತ್ಯ ಪರಿಷತ್ ನ ರಾಜ್ಯಾಧ್ಯಕ್ಷ ಫಯಾಜ್ ರವರು ಸಾಲು ಮರದ ತಿಮ್ಮಕ್ಕನವರ ಕುರಿತು ಮಾತನಾಡಿದರು. ದಲಿತ ಮುಖಂಡ ಇಸ್ಕೂಲಪ್ಪ ಸಾಲು ಮರದ ತಿಮ್ಮಕ್ಕನವರ ಕುರಿತು ಪರಿಸರ ಗೀತೆಯನ್ನು ಹಾಡುವ ಮೂಲಕ ತಿಮ್ಮಕ್ಕನವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಿದರು. ಈ ಸಮಯದಲ್ಲಿ ಗುಡಿಬಂಡೆಯ ಸಾರ್ವಜನಿಕರು, ಮುಖಂಡರು, ಶಿಕ್ಷಕರು ಸೇರಿದಂತೆ ಹಲವರು ಇದ್ದರು.
