ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳಲ್ಲಿ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದು, ಈ ಸಂಬಂಧ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂಬ ಆಫರ್ ಸಹ ಘೋಷಣೆ ಮಾಡಿದ್ದಾರೆ. ಇದೀಗ ಜುಲೈ ಹಾಗೂ ಆಗಸ್ಟ್ ಮಾಹೆಯ ಗೃಹಲಕ್ಷ್ಮೀ (Gruhalakshmi Scheme) ಕಂತು ಬಿಡುಗಡೆಯ ಬಗ್ಗೆ ಸಚಿವೆ ಶುಭ ಸುದ್ದಿ ಕೊಟ್ಟಿದ್ದಾರೆ. ಇನ್ನೂ 5-10 ದಿನಗಳ ಒಳಗೆ ಎರಡು ತಿಂಗಳ ಕಂತು ಬಿಡುಗಡೆ ಮಾಡುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಗೃಹಲಕ್ಷ್ಮೀ (Gruhalakshmi Scheme) ಜಾರಿಯಾಗಿ ಒಂದು ವರ್ಷ ಪೂರ್ಣ:
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ತಿಳಿಸಿದಾಗ ವಿರೋಧ ಪಕ್ಷಗಳು ಚುನಾವಣಾ ಗಿಮಿಕ್ ಎಂಬ ಆರೋಪಗಳನ್ನು ಮಾಡಿತ್ತು. ಇದೇ ಗ್ಯಾರಂಟಿಗಳನ್ನು ಮೆಚ್ಚಿ ಮತದಾರರು ಕಾಂಗ್ರೇಸ್ ಸರ್ಕಾರಕ್ಕೆ ಮತ ಚಲಾಯಿಸಿದರು. ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಕಾಂಗ್ರೇಸ್ ಪಕ್ಷ ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯದ ಅರ್ಹ ಮನೆಯ ಯಜಮಾನಿಗೆ ಪ್ರತಿ ಮಾಹೆ 2 ಸಾವಿರ ಜಮೆ ಮಾಡುತ್ತಿದೆ. ಸದ್ಯ ಜೂನ್ ಮಾಹೆಯವರೆಗೂ ಗೃಹಲಕ್ಷ್ಮೀ ಹಣವನ್ನು ಜಮೆ ಮಾಡಿದೆ. ಆದರೆ ಜುಲೈ ಹಾಗೂ ಆಗಸ್ಟ್ ಮಾಹೆಯ ಕಂತನ್ನು ಇನ್ನೂ ಜಮೆ ಮಾಡಿಲ್ಲ. ಈ ಕುರಿತು ಸಚಿವೆ ಹೆಬ್ಬಾಳ್ಕರ್ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
5-10 ದಿನಗಳಲ್ಲಿ ಜುಲೈ-ಆಗಸ್ಟ್ ಮಾಹೆಯ (Gruhalakshmi Scheme) ಕಂತು ಬಿಡುಗಡೆ:
ಚಿತ್ರದುರ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಾಕಿಯಿರುವ ಜುಲೈ ಹಾಗೂ ಆಗಸ್ಟ್ ಮಾಹೆಯ ಗೃಹಲಕ್ಷ್ಮೀ ಯೋಜನೆಯ ಹಣವನ್ನು 5-10 ದಿನಗಳ ಒಳಗೆ ಜಮೆ ಮಾಡುವುದಾಗಿ ತಿಳಿಸಿದ್ದಾರೆ. ಇಲ್ಲಿಯವರೆಗೂ ಈ ಯೋಜನೆಯಡಿ 26,260 ಕೋಟಿ ಹಣ ಮಹಿಳೆಯರ ಖಾತೆಗೆ ಜಮೆ ಮಾಡಲಾಗಿದೆ. ಈ ಯೋಜನೆಯ ಹಣ ದೇಶದ ಸಣ್ಣಪುಟ್ಟ ರಾಜ್ಯಗಳ ವಾರ್ಷಿಕ ಆಯವ್ಯಯಕ್ಕೆ ಸಮನಾಗಿದೆ ಎಂದು ತಿಳಿಸಿದ್ದಾರೆ. ಇನ್ನೂ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀಯರಿಗೆ ಆಫರ್ ಒಂದನ್ನು ನೀಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ತಮ್ಮ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಿದೆ ಎಂಬುದನ್ನು ರೀಲ್ಸ್ ಮಾಡಿ ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಿ, ಹೆಚ್ಚು ವೀಕ್ಷಣೆ ಪಡೆದ ರೀಲ್ಸ್ ಗೆ ಬಹುಮಾನ ನೀಡುವುದಾಗಿ ಸಚಿವೆ ಹೆಬ್ಬಾಳ್ಕರ್ ಘೋಷಣೆ ಮಾಡಿದ್ದಾರೆ.
ಇನ್ನೂ ಖಾಸಗಿ ನರ್ಸರಿಗಳ ಹಾವಳಿ ತಡೆಗಟ್ಟಿ, ಬಡವರ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಿಂದ ಸರ್ಕಾರವೇ ರಾಜ್ಯದ ಅಂಗನವಾಡಿಗಳಲ್ಲಿ ಎಲ್.ಕೆ.ಜಿ. ಯುಕೆಜಿ ಶಿಕ್ಷಣ ನೀಡಲು ಸರ್ಕಾರಿ ಮಾಂಟೆಸ್ಸರಿ ಪ್ರಾರಂಬ ಮಾಡಲು ದಿಟ್ಟ ಹೆಜ್ಜೆ ಇಟ್ಟಿದೆ. ಇದಕ್ಕೆ ನೇಮಕಗೊಳ್ಳುವವರಿಗೆ ಪಿಯುಸಿ ಕನಿಷ್ಟ ವಿದ್ಯಾರ್ಹತೆ ನಿಗಧಿಪಡಿಸಿದೆ. ರಾಜ್ಯದಲ್ಲಿ ಪದವಿ, ಸ್ನಾತಕೋತ್ತರ ಪದವಿಧರ ಮಹಿಳೆಯರೂ ಸಹ ಅರ್ಜಿ ಸಲ್ಲಿಸಿದ್ದಾರೆ ಎಂದರು. ಮುಂದುವರೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆಯ ವತಿಯಿಂದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳು ಆರೋಗ್ಯವಂತರಾಗಲಿ ಎಂಬ ದೃಷ್ಟಿಯಿಂದ ಅಂಗನವಾಡಿ ಕೇಂದ್ರ ಗಳ ಮೂಲಕ ಪೌಷ್ಟಿಕ ಆಹಾರ ನೇರವಾಗಿ ಅವರ ಮನೆಗೆ ತಲುಪಿಸುತ್ತಿದೆ. ಆದರೆ ಕೆಲವೊಂದು ಕಡೆ ಈ ಆಹಾರ ಅಕ್ರಮವಾಗಿ ಬೇರೆಯವರ ಮನೆ ಸೇರುತ್ತಿದೆ ಎಂಬ ದೂರುಗಳೂ ಸಹ ಬಂದಿದ್ದು, ಈ ಸಂಬಂಧ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.