Game Changer – ಇತ್ತೀಚಿಗಷ್ಟೆ ಪುಷ್ಪಾ-2 ಸಿನೆಮಾದ ಪ್ರೀಮಿಯರ್ ಶೋ ವೇಳೆ ನಡೆದಂತಹ ಘಟನೆ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಹೈದರಾಬಾದ್ ನ ಸಂಧ್ಯಾ ಥಿಯೇಟರ್ ನ ಕಾಲ್ತುಳಿತ ಪ್ರಕರಣದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣದ ಹಿನ್ನೆಲೆಯಲ್ಲಿ ನಟ ಅಲ್ಲು ಅರ್ಜುನ್ ಸಹ ಜೈಲಿಗೆ ಹೋಗಿ ಬಳಿಕ ಜಾಮೀನು ಮೇರೆಗೆ ಹೊರಬಂದಿದ್ದರು. ಇದೀಗ ಗೇಮ್ ಚೇಂಜರ್ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರು ಅಭಿಮಾನಿಗಳು ಅಪಘಾತದಲ್ಲಿ ಮೃತಪಟ್ಟಿದ್ದು, ಇಬ್ಬರಿಗೂ ಚಿತ್ರತಂಡ ಪರಿಹಾರ ಘೋಷಣೆ ಮಾಡಿದೆ.

ಕಳೆದ ಜ.4 ರಂದು ಗೇಮ್ ಚೇಂಜರ್ ಸಿನೆಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಂಧ್ರಪ್ರದೇಶದ ರಾಜಮಹೇಂದ್ರವರಂ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಬಂದಿದ್ದ ಕಾಕಿನಾಡ ಜಿಲ್ಲೆಯ ಮಣಿಕಂಠ (23) ಹಾಗೂ ಚರಣ್ (22) ರವರು ಮನೆಗೆ ವಾಪಸ್ ಹೋಗುತ್ತಿದ್ದರು. ಈ ಸಮಯದಲ್ಲಿ ಅಪಘಾತ ಸಂಭವಿಸಿದ್ದು, ಇಬ್ಬರೂ ಮೃತಪಟ್ಟಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ನಿರ್ಮಾಪಕ ದಿಲ್ ರಾಜು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಬ್ಬರಿಗೂ ಪರಿಹಾರ ಸಹ ಘೋಷಣೆ ಮಾಡಿದ್ದಾರೆ. ಮೃತ ಕುಟುಂಬಗಳಿಗೆ ತಲಾ 5 ಲಕ್ಷ ಆರ್ಥಿಕ ನೆರವು ಘೋಷಣೆ ಮಾಡಿದ್ದಾರೆ.
ಈ ಕುರಿತು ನಿರ್ಮಾಪಕ ದಿಲ್ ರಾಜು ಮಾತನಾಡಿ, ಗೇಮ್ ಚೇಂಜರ್ ಪ್ರೀ ರಿಲೀಸ್ ಈವೆಂಟ್ ತುಂಬಾ ಅದ್ದೂರಿಯಾಗಿ ನಡೆದಿತ್ತು. ಈ ಸಂತಸವನ್ನು ಅನುಭವಿಸುವ ಸಮಯದಲ್ಲೇ ಇಬ್ಬರು ಅಭಿಮಾನಿಗಳು ಅಪಘಾತದಲ್ಲಿ ಮೃತಪಟ್ಟಿರುವ ವಿಚಾರ ತಿಳಿದು ತುಂಬಾ ನೋವಾಯಿತು. ಅವರ ಕುಟುಂಬಗಳಿಗೆ ನಾನು ಬೆಂಬಲವಾಗಿ ನಿಲ್ಲುತ್ತೇನೆ. ನನ್ನ ಕಡೆಯಿಂದ ಅವರ ಕುಟುಂಬಗಳಿಗೆ ತಲಾ 5 ಲಕ್ಷ ಆರ್ಥಿಕ ನೆರವು ನೀಡುತ್ತೇನೆ. ಈ ರೀತಿಯ ಘಟನೆಗಳು ನಡೆದಾಗ ಅವರು ಕುಟುಂಬಗಳಲ್ಲಿ ಯಾವ ರೀತಿಯ ನೋವಿರುತ್ತದೆ ಎಂಬುದು ನನಗೆ ಅರ್ಥವಾಗುತ್ತದೆ. ನಾನು ಅವರ ಕುಟುಂಬದ ನೋವಿನಲ್ಲಿ ಜೊತೆಯಾಗಿರುತ್ತೇನೆ ಎಂದಿದ್ದಾರೆ.
ಇನ್ನೂ ಗೇಮ್ ಚೇಂಜರ್ ಸಿನೆಮಾದ ನಿರ್ಮಾಪಕ ದಿಲ್ ರಾಜು ರವರಿಗೂ ಮೃತಪಟ್ಟವರಿಗೂ ಯಾವುದೇ ಸಂಬಂಧವಿಲ್ಲ. ಅಭಿಮಾನಿಗಳು ಅಪಘಾತದಲ್ಲಿ ಮೃತಪಟ್ಟಿದ್ದು, ಪ್ರೀ ರಿಲೀಸ್ ಈವೆಂಟ್ ನಡೆದ ಜಾಗದಲ್ಲೂ ಅಲ್ಲ. ಆದರೂ ಸಹ ನಿರ್ಮಾಪಕರು ಪರಿಹಾರ ಘೋಷನೆ ಮಾಡಿದ್ದಾರೆ. ಮುಂದೆ ಸಂಭವಿಸಬಹುದಾದಂತಹ ಸಮಸ್ಯೆಗಳನ್ನು ಮೊದಲೇ ಊಹಿಸಿದ ದಿಲ್ ರಾಜು ಪರಿಹಾರ ಘೋಷಣೆ ಮಾಡಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿದೆ. ಇನ್ನೂ ಈ ಪ್ರೀ ರಿಲೀಸ್ ಈವೆಂಟ್ ಕಾರ್ಯಕ್ರಮಕ್ಕೆ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೇಮ್ ಚೇಂಜರ್ ಸಿನೆಮಾ ಇದೇ ಜ.10 ರಂದು ಅದ್ದೂರಿಯಾಗಿ ತೆರೆಕಾಣಲಿದೆ.