Fire Safety – ಅಗ್ನಿ ಸುರಕ್ಷತೆಗೆ ನಮ್ಮ ಮುಂಜಾಗ್ರತಾ ಕ್ರಮಗಳೇ ಅಡಿಪಾಯ ಎಂದು ಗುಡಿಬಂಡೆ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಅನಂತರಾಜ್ ಅವರು ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಅಗ್ನಿಶಾಮಕ ಠಾಣೆ ಹಾಗೂ ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್ ಜಂಟಿಯಾಗಿ ಆಯೋಜಿಸಿದ್ದ ಅಗ್ನಿ ಸುರಕ್ಷತೆ – ಸಾಧಕ ಬಾಧಕಗಳ ಕುರಿತಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸೆಂಟರ್‌ನ ವಿದ್ಯಾರ್ಥಿಗಳಿಗೆ ಈ ಜಾಗೃತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿತ್ತು.
Fire Safety – ಅಗ್ನಿ ಸುರಕ್ಷತೆಯ ಮಹತ್ವ ಮತ್ತು ರಕ್ಷಣಾ ಕ್ರಮಗಳು
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಅನಂತರಾಜ್ ಅವರು, ಅಗ್ನಿ ಸುರಕ್ಷತೆ ಎಷ್ಟು ಮುಖ್ಯವಾದದ್ದು ಎಂಬುದನ್ನು ವಿವರಿಸಿದರು. ಅಲ್ಲದೆ, ಬೇರೆ ಬೇರೆ ರೀತಿಯ ಬೆಂಕಿ ಕಾಣಿಸಿಕೊಂಡಾಗ ಯಾವ ರೀತಿಯ ರಕ್ಷಣಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುವುದರ ಬಗ್ಗೆಯೂ ಉಪಯುಕ್ತ ಮಾಹಿತಿಯನ್ನು ನೀಡಿದರು.
Fire Safety – ಬೆಂಕಿಯ ಅಪಾಯಗಳು ಮತ್ತು ಸುರಕ್ಷತಾ ಕ್ರಮಗಳ ಪ್ರಾತ್ಯಕ್ಷಿಕೆ
ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬೆಂಕಿಯಿಂದ ಉಂಟಾಗುವ ಅಪಾಯಗಳ ಬಗ್ಗೆ ತಿಳಿಸಲಾಯಿತು. ಅಷ್ಟೇ ಅಲ್ಲದೆ, ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರವಾಗಿ ತಿಳಿಸಿಕೊಡಲಾಯಿತು. ವಿದ್ಯಾರ್ಥಿಗಳು ಇದನ್ನು ಆಸಕ್ತಿಯಿಂದ ವೀಕ್ಷಿಸಿದರು.
Fire Safety – ಬೆಂಕಿ ನಂದಿಸುವ ವಿಧಾನಗಳ ಲೈವ್ ಡೆಮೊ
ಪ್ರಾತ್ಯಕ್ಷಿಕೆಯ ನಂತರ, ಬೆಂಕಿಯನ್ನು ಹೇಗೆ ನಿಯಂತ್ರಣಕ್ಕೆ ತರಬಹುದು ಎಂಬುದರ ಕುರಿತು ಲೈವ್ ಡೆಮೊ ನಡೆಯಿತು. ಸ್ಥಳದಲ್ಲಿದ್ದ ಅಗ್ನಿಶಾಮಕ ವಾಹನವು ವಿವಿಧ ರೀತಿಯ ಬೆಂಕಿ ನಂದಿಸುವ ವಿಧಾನಗಳನ್ನು ಪ್ರದರ್ಶಿಸಿತು. ಫೋಮ್ ಆಧಾರಿತ, ಸ್ಪ್ರಿಂಕ್ಲರ್-ನೀರಿನ ಆಧಾರಿತ, ಕಾರ್ಬನ್ ಡೈಆಕ್ಸೈಡ್-ತಂಪಾಗಿಸುವ ಪರಿಣಾಮದ ಆಧಾರಿತ ಮತ್ತು ಇನ್ನಿತರ ವಿಧಾನಗಳ ಮೂಲಕ ಬೆಂಕಿಯನ್ನು ನಂದಿಸುವ ಪ್ರಕ್ರಿಯೆಯನ್ನು ತೋರಿಸಲಾಯಿತು. ಇದು ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತ ಮಾಹಿತಿಯನ್ನು ನೀಡಿತು. Read this also : Janaspandana : ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ – ಶಾಸಕ ಸುಬ್ಬಾರೆಡ್ಡಿ ಭರವಸೆ…!
ಈ ಪ್ರಾತ್ಯಕ್ಷಿಕೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ಬೀರಪ್ಪ ಬನಜ್, ಅಶೋಕ್ ನಾಯಕ್, ಮತ್ತು ರಾಘವೇಂದ್ರ ಆರ್ ಅವರು ಸಕ್ರಿಯವಾಗಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಲಕ್ಷ್ಮಣ ತಳವಾರ್, ಗ್ರೀನ್ ಸಲ್ಯೂಷನ್ ಕಂಪ್ಯೂಟರ್ ಸಂಸ್ಥೆಯ ಮುಖ್ಯಸ್ಥ ಬಿ. ಮಂಜುನಾಥ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.