Fengal Cyclone ಕಳೆದೆರಡು ದಿನಗಳಿಂದ ಫೆಂಗಲ್ ಚಂಡಮಾರುತ ಆರ್ಭಟ ಜೋರಾಗಿದ್ದು, ಫೆಂಗಲ್ ಚಂಡಮಾರುತದಿಂದಾಗಿ ಕರ್ನಾಟಕದ ಹಲವು ಕಡೆ ಮಳೆ ಗಾಳಿ ಹಾಗೂ ಚಳಿ ಅಬ್ಬರ ಜೋರಾಗಿದೆ. ಅದರಲ್ಲೂ ಕೆಲವೊಂದು ಜಿಲ್ಲೆಗಳಲ್ಲಿ ಭಾರಿ ಅವಾಂತರ ಸಹ ಸೃಷ್ಟಿಯಾಗಿದೆ. ಈ ಕಾರಣದಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಡಿ.2 ರಂದು ಶಾಲಾ ಕಾಲೇಜುಗಳಿಗೆ ರಜೆ ಸಹ ಘೋಷಣೆ ಮಾಡಲಾಗಿತ್ತು. ನಾಳೆ ಅಂದರೇ ಡಿ.3 ರಂದು ಸಹ ಫೆಂಗಲ್ ಚಂಡಮಾರುತದ (Fengal Cyclone) ಹಿನ್ನೆಲೆಯಲ್ಲಿ ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಫೆಂಗಲ್ ಚಂಡಮಾರುತವು ಉತ್ತರ ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಭಾಗದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಳೆ ಆರ್ಭಟ ಜೋರಾಗಿದೆ. ಸದ್ಯ ನವೆಂಬರ್ 30 ರಿಂದಲೇ ಕರ್ನಾಟಕಕ್ಕೂ ಎಂಟ್ರಿ ಕೊಟ್ಟಿರುವ ಚಂಡಮಾರುತ ರಾಜ್ಯದಲ್ಲಿ ಅನಾಹುತ ಸೃಷ್ಟಿಸುತ್ತಿದೆ. ಚಾಮರಾಜನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬಿಟ್ಟು ಬಿಡದೆ ಸುರಿಯುತ್ತಿದೆ. ಜಿಲ್ಲೆಗಳಲ್ಲಿ ಮಳೆ ಬಿರುಸು ಪಡೆದುಕೊಂಡಿರುವುದರಿಂದ ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ರೈತರು ಪರದಾಡುವ ಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಫೆಂಗಲ್ ಚಂಡಮಾರುತ ಹಿನ್ನೆಲೆಯಲ್ಲಿ ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ, ಕೋಲಾರ, ಚಾಮರಾಜನಗರ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ(ಪದವಿ ಪೂರ್ವ) ನಾಳೆ ರಜೆ ನೀಡಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ಇನ್ನೂ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಕೋಲಾರ ಜಿಲ್ಲೆಯಲ್ಲಿ ನಾಳೆಯೂ ಸಹ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ನಾಳಿನ ರಜೆಯನ್ನು ಮತ್ತೊಂದು ರಜಾ ದಿನದಲ್ಲಿ ತರಗತಿ ನಡೆಸಿ ಸರಿದೂಗಿಸಲು ಸೂಚನೆ ನೀಡಿ ಕೋಲಾರ ಡಿಸಿ ಅಕ್ರಂ ಪಾಷಾ ಆದೇಶಿಸಿದ್ದಾರೆ.