ಮಳೆಗಾಲ ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಭೀತಿ ಸಹ ಹೆಚ್ಚಾಗುತ್ತಿದೆ. ಈಗಾಗಲೇ ಹಲವು ಕಡೆ ಡೆಂಘಿ ಜೊತೆಗೆ ಹಲವು ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಕಾಡುತ್ತಿದೆ. ಇದೀಗ ಡೆಂಘಿ ಜೊತೆಗೆ ವೆಸ್ಟ್ ನೈಲ್ ಜ್ವರದ (West Nile Fever) ಆತಂಕ ಹೆಚ್ಚಾಗಿದೆ. ಈಗಾಗಲೇ ಕೇರಳ ಹಾಗೂ ತಮಿಳುನಾಡಿನಲ್ಲಿ ಈ ಜ್ವರ ವರದಿಯಾಗಿದ್ದು, ಬೆಂಗಳೂರಿನಲ್ಲಿ ವಕ್ಕರಿಸುವಂತಹ ಆತಂಕ ಶುರುವಾಗಿದ್ದು, ಆರಂಭದಲ್ಲೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ ಎನ್ನಲಾಗಿದೆ.
ದೇಶದಲ್ಲಿ ಬೇಸಿಗೆ ಮಳೆಯ ಬೆನ್ನಲ್ಲೆ ಡೆಂಘಿ ಜ್ವರದ ಕಾಟ ಶುರುವಾಗಿತ್ತು. ಇದೀಗ ಅದರ ಜೊತೆಗೆ ಕ್ಯೂಲೆಕ್ಸ್ ಎಂಬ ಸೊಳ್ಳೆಗಳಿಂದ ಬರುವಂತಹ ವೆಸ್ಟ್ ನೈಲ್ ಎಂಬ ಜ್ವರ (West Nile Fever) ಶುರುವಾಗಿದೆ. ಕಾಲರಾ, ಡೆಂಘಿ ಜ್ವರ, ನಿಫಾ, ಹಕ್ಕಿಜ್ವರ, ಹಂದಿ ಜ್ವರ ಇದೀಗ ವೆಸ್ಟ್ ನೈಲ್ ಜ್ವರದ ಸರದಿಯಾಗಿದೆ. ಕರ್ನಾಟಕದ ನೆರೆಯ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಈ ಜ್ವರ ಕಾಣಿಸಿಕೊಂಡಿರುವುದು ಮತಷ್ಟು ಆತಂಕಕ್ಕೆ ಕಾರಣವಾಗಿದೆ. ಈ ಜ್ವರ ಸಾಮಾನ್ಯ ಜ್ವರಕ್ಕಿಂದ ವಿಭಿನ್ನವಾಗಿರುವ ಕಾರಣದಿಂಧ ತೀವ್ರ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ. ಕ್ಯೂಲೆಕ್ಸ್ ಎಂಬ ಜಾತಿಯ ಸೊಳ್ಳೆಗಳಿಂದ ಈ ವೆಸ್ಟ್ ನೈಲ್ ಜ್ವರ ಹರಡುತ್ತಿದೆ. ಜ್ವರದ ಜೊತೆಗೆ ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ಊದಿಕೊಂಡ ಗ್ರಂಥಿಗಳಂತಹ ರೋಗ ಲಕ್ಷಣಗಳು ಸೋಂಕಿತರಲ್ಲಿ ಕಾಣಿಸಿಕೊಳ್ಳುತ್ತದೆ. ಇದರ ಪ್ರಭಾವ ಗಂಭೀರವಾದರೇ ನಡುಕ, ಸೆಳೆತ, ಕೋಮಾ, ಸ್ನಾಯು ದೌರ್ಬಲ್ಯ, ಪಾರ್ಶ್ವವಾಯು, ದೃಷ್ಟಿ ನಷ್ಟ ಮೊದಲಾ ಸಮಸ್ಯೆಗಳು ಉಂಟಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಈ ಜ್ವರದ ಆರಂಭದಲ್ಲಿ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲವಾದದ್ದರಿಂದ ಜ್ವರವನ್ನು ಪತ್ತೆ ಹಚ್ಚುವುದು ದೊಡ್ಡ ಸಮಸ್ಯೆಯಾಗಿದೆ. ಅಂಗಾಗ ಕಸಿ, ರಕ್ತ ವರ್ಗಾವಣೆ, ಗರ್ಭಾವಸ್ಥೆಯಲ್ಲಿ ಅಥವಾ ಮಗುವಿಗೆ ಹಾಲುಣಿಸುವ ಸಮಯದಲ್ಲಿ ಈ ವೈರಸ್ ಹರಡುವ ಸಾಧ್ಯತೆಯಿದೆ. ಸದ್ಯ ವೆಸ್ಟ್ ನೈಲ್ ಜ್ವರದ ಬಗ್ಗೆ ಯಾವುದೇ ಆತಂಕವಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಎಲ್ಲಾ ಕಡೆ ಡೆಂಘಿ ಏರಿಕೆಯ ಆತಂಕ ಹಾಗೂ ವೆಸ್ಟ್ ನೈಲ್ ಜ್ವರದ ಆಂತಕ ಜನರಲ್ಲಿ ಹೆಚ್ಚಾಗಿದೆ. ಆದ್ದರಿಂದ ಜನರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ನೈರ್ಮಲ್ಯ ಕಾಪಾಡುವುದು ತುಂಬಾ ಅಗತ್ಯವಾಗಿದೆ ಜೊತೆಗೆ ಮಳೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ತುಂಬಾನೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.