Farmers- ಅಧಿಕ ಇಳುವರಿ ಪಡೆಯುವ ನಿಟ್ಟಿನಲ್ಲಿ ಇತ್ತೀಚಿಗೆ ರೈತರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಹೆಚ್ಚಾಗಿ ಪೀಡೆನಾಶಕಗಳನ್ನು ಬಳಸುತ್ತಿದ್ದು, ಇದರಿಂದ ತಾವು ಬೆಳೆಯುವ ಬೆಳೆ ಸಹ ವಿಷಯುಕ್ತವಾಗುತ್ತದೆ, ಭೂಮಿಯ ಫಲವತ್ತತೆ ಸಹ ಕಡಿಮೆಯಾಗುತ್ತದೆ. ಆದ್ದರಿಂದ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು (Farmers) ಬಿಟ್ಟು, ಸಾವಯವ ಗೊಬ್ಬರಗಳನ್ನು ಬಳಸಿ ಆರೋಗ್ಯಕರ ಆಹಾರ ತಯಾರಿಸುವುದರ ಜೊತೆಗೆ ಭೂಮಿಯ ಫಲವತ್ತತೆಯನ್ನೂ ಸಹ ಕಾಪಾಡಬೇಕು ಎಂದು ಚಿಕ್ಕಬಳ್ಳಾಪುರ ಉಪ ಕೃಷಿ ನಿರ್ದೇಶಕಿ ದೀಪಾಶ್ರೀ ಮನವಿ ಮಾಡಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ದಪ್ಪರ್ತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತಿ ಚಿಕ್ಕಬಳ್ಳಾಪುರ, ತಾಲೂಕು ಪಂಚಾಯತಿ ಗುಡಿಬಂಡೆ ಹಾಗೂ ಕೃಷಿ ಇಲಾಖೆ ರವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ 2024-2025ನೇ ಸಾಲಿನ ಸಸ್ಯ ಸಂರಕ್ಷಣಾ ಯೋಜನೆಯಡಿ ಸಸ್ಯ ಸಂರಕ್ಷಣಾ ಔಷಧಿಗಳ ಶಿಫಾರಸ್ಸು ಮತ್ತು ಸುರಕ್ಷಿತ ಬಳಕೆ ತರಬೇತಿ ವಿಶೇಷ ಅಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ವಿಜ್ಞಾನಿಗಳ ಸಲಹೆ ಹಾಗೂ ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಂತೆ ಹಾಗೂ ಶಿಫಾರಸ್ಸಿನಂತೆ ರೈತ ಬಾಂದವರು ಕೀಟನಾಶಕಗಳನ್ನು ಬಳಸಬೇಕೆಂದರು.
ಬಳಿಕ ಜಿ.ಕೆ.ವಿ.ಕೆ ವಿಜ್ಞಾನಿಗಳಾದ ಡಾ.ಸ್ವಾತಿ ಮಾತನಾಡಿ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬೆಳೆಗಳಿಗೆ ಕೆಲವೊಂದು ರೋಗಗಳು ಅವಧಿಗೂ ಮುಂಚೆಯೇ ಕಾಣಿಸಿಕೊಳ್ಳುತ್ತದೆ. ರೈತರು ಈ ಕುರಿತು ಜಾಗೃತರಾಗಬೇಕು. ಜೊತೆಗೆ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಸಲಹೆಗಳನ್ನು ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಮುಸುಕಿನ ಜೋಳ ಹಾಗೂ ನೆಲಗಡಲೆ. ತೊಗರಿ ಬೆಳೆಗಳಲ್ಲಿ ಹೆಚ್ಚಾಗಿ ರೋಗ ಹಾಗೂ ಕೀಟಬಾಧೆ ಕಂಡುಬಂದಿದ್ದು ಅವುಗಳ ಹತೋಟಿ ಕ್ರಮಗಳ ಬಗ್ಗೆ ವಿವರವಾಗಿ ತರಬೇತಿಯನ್ನು ನೀಡಿ, ಸೈನಿಕ ಹುಳುವಿನ ಬಾದೆ ಹೆಚ್ಚಾಗಿ ಇರುವುದರಿಂದ ಸಮಗ್ರ ಹತೋಟಿ ಕೈಗೊಳ್ಳಲು ತಿಳಿಸಿದರು.
ಸಾವಯವ ತಜ್ಞರು ಹಾಗೂ ಕೃಷಿಕ ಸಮಾಜದ ಕಾರ್ಯದರ್ಶಿ ರಾಜ್‌ಗೋಪಾಲ್ ಮಾತನಾಡಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಹಾಗೂ ಸಿರಿಧಾನ್ಯಗಳನ್ನು ಹೆಚ್ಚಾಗಿ ರೈತರು ಬೆಳೆಯಲು ಮನವಿ ಮಾಡಿದರು. ರೈತ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ರೈತರಿಗೆ ಈ ಬಾರಿ ಮುಸುಕಿನ ಜೋಳ ಹೆಚ್ಚಾಗಿ ನಾಶವಾಗಿದ್ದು, ಬೆಳೆ ಕಟಾವಿನ ಬಗ್ಗೆ ಸರಿಯಾದ ಮಾಹಿತಿಯನ್ನು ನಮೂದಿಸಿ. ರೈತರಿಗೆ ಬೆಳೆ ವಿಮೆಯ ಪರಿಹಾರ ಒದಗಿಸಬೇಕಾಗಿ ಸಭೆಗೆ ತಿಳಿಸಿದರು. ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ವಿಜೇತರು ಹಾಗೂ ಸಾವಯವ ಕೃಷಿಕರಾದ ಲಕ್ಷ್ಮೀನಾರಾಯಣರೆಡ್ಡಿ ಮಾತನಾಡಿ ಸಮಗ್ರ ಕೃಷಿ ಯಿಂದ ರೈತರ ಆದಾಯ ದ್ವಿಗುಣವಾಗಲಿದ್ದು, ಸಾವಯವ ಕೃಷಿಯ ಬಗ್ಗೆ ಎಲ್ಲಾ ರೈತರು ಅರಿತು ಮಾಡಬೇಕೆಂದರು.
ಈ ಸಂದರ್ಭದಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕೇಶವರೆಡ್ಡಿ, ಕೃಷಿಕ ಸಮಾಜದ ಕಾರ್ಯದರ್ಶಿ ರಾಜ್‌ಗೋಪಾಲ್, ರೈತ ಸಂಘದ ಮುಖಂಡ ನಾರಾಯಣಸ್ವಾಮಿ, ಕೃಷಿ ಅಧಿಕಾರಿಗಳಾದ ಶಂಕರಯ್ಯ, ಬೇಯರ್ ಸಂಸ್ಥೆಯ ಪ್ರತಿನಿಧಿಯಾದ ವರದರಾಜು, ರಾಘವೇಂದ್ರ ಹಾಜರಿದ್ದರು. ಈ ವೇಳೆ ವಾಹಿನಿ ಅಭಿವೃದ್ಧಿ ಸಂಸ್ಥೆಯ ಸುರೇಶ್ ರವರು ಸಾವಯವ ಕೃಷಿ ಬಗ್ಗೆ ತರಬೇತಿ ನೀಡಿದರು.