ಗುಡಿಬಂಡೆ: ತಾಲೂಕಿನ ಉಲ್ಲೋಡು ಗ್ರಾ.ಪಂ. ವ್ಯಾಪ್ತಿಯ ಐದು ಗ್ರಾಮಗಳು ಸೇರಿ ಹಮ್ಮಿಕೊಂಡಿದ್ದ ಮೂರು ದಿನಗಳ ಜಾತ್ರಾ ಮಹೋತ್ಸವ ಹಾಗೂ ತೆಂಗಿನ ಕಾಯಿ ಕಾಯುಟ್ಲು ಪರುಷೆ ಅದ್ದೂರಿಯಾಗಿ ನೆರವೇರಿದ್ದು, ಪರುಷೆಯಲ್ಲಿ ಪಾನಕ, ಮಜ್ಜಿಗೆ, ಹೆಸರು ಬೆಳೆ ಹಂಚಿಕೆ: ಜಾತ್ರೆಯಲ್ಲಿ ದೂರದಿಂದ ಬಂದಂತಹ ಭಕ್ತಾಗಳಿಗೆ ಐದು ಗ್ರಾಮಗಳ ಜನರು ಎತ್ತಿನಗಾಡಿ, ಟ್ರಾಕ್ಟರ್‌ಗಳ ಮೂಲಕ ಮಜ್ಜಿಗೆ, ಬೆಲ್ಲದ ಪಾನಕ, ಹೆಸರು ಬೆಳೆ ಹಂಚಿದರು.
ತಾಲೂಕಿನ ಉಲ್ಲೋಡು ಗ್ರಾಮ ಪಂಚಾಯಿತಿಯ, ಉಲ್ಲೋಡು, ಪುಲುವಮಾಕಲಹಳ್ಳಿ, ಅಲಗದರೇನಹಳ್ಳಿ, ಗೇರುಮರದಹಳ್ಳಿ, ಚೌಟತಿಮ್ಮನಹಳ್ಳಿ, ಗ್ರಾಮಗಳು ಅಭಯ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ಗ್ರಾಮಗಳ ಹಬ್ಬವಾಗಿ ಈ ಜಾತ್ರೆಯನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಜಾತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಹಿರಿಯರು ಮತ್ತು ಮಹಿಳೆಯರು ಭಾಗವಹಿಸಿ ಸಡಗರ ಸಂಭ್ರಮದಿಂದ ಜನರು ಒಂದೆಡೆ ಸೇರಿ ಊಟ್ಲು ಪರುಷೆಯನ್ನು ಆಚರಿಸಿದರು.
ಎತ್ತರದ ಮರದ ಕಂಬದ ಮೇಲೆ ನಿರ್ಮಿಸಿರುವ ತಿರುಗುವ ತೊಟ್ಟಿಲಲ್ಲಿ ಇಬ್ಬರು ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ಒಡೆಯುವುದು ಇಲ್ಲಿನ ಜಾತ್ರೆಯ ವಿಶೇಷ. ಹತ್ತಾರು ಯುವಕರು ಉದ್ದನೆಯ ದೊಣ್ಣೆ ಕೋಲುಗಳನ್ನು ಹಿಡಿದು ಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದರು. ಕಾಯಿ ವೇಗವಾಗಿ ವಿವಿಧ ಎತ್ತರಗಳಲ್ಲಿ ತಿರುಗಿಸಲ್ಪಡುವ ತೆಂಗಿನ ಕಾಯಿ ಒಡೆಯುವುದು ಒಂದು ಮನೋರಂಜನೆಯಾಗಿತ್ತು. ಗ್ರಾಮ ದೇವತೆಗಳ ಜಾತ್ರೆಯಲ್ಲಿ 5 ಗ್ರಾಮಗಳ ಮಹಿಳೆಯರು, ಮಕ್ಕಳು ಗ್ರಾಮ ದೇವತೆಗಳಿಗೆ ತಂಬಿಟ್ಟು ಜೋತಿಗಳನ್ನು ಹೊತ್ತು ತಂದು ದೇವರಿಗೆ ಅರ್ಪಿಸಿದರು.