Education – ರಾಜ್ಯದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದರ ಜೊತೆಗೆ ಉದ್ಯೋಗಗಳನ್ನು ದೊರಕಿಸಿಕೊಡುವುದೇ ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಉದ್ಯೋಗಾಧಾರಿತ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುಮಾರು 7 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ತುಂಬಾ ಮುಖ್ಯವಾಗಿದೆ. ಶಿಕ್ಷಣ ಇಲ್ಲದೇ ಏನನ್ನೂ ಪಡೆಯಲು ಸಾಧ್ಯವಿಲ್ಲ. ಕನ್ನಡದ ಜೊತೆಗೆ ಇಂಗ್ಲೀಷ್ ಭಾಷೆಯನ್ನೂ ಸಹ ತಾವು ಕಲಿಯಬೇಕು. ಕಾಲೇಜಿನಲ್ಲಿ ತಮ್ಮ ಸಹಪಾಠಿಗಳೊಡನೆ ಇಂಗ್ಲೀಷ್ ನಲ್ಲಿ ಸಂವಹನ ನಡೆಸಲು ಮುಂದಾಗಿ. ಇಂಗ್ಲೀಷ್ ಭಾಷೆಯ ಸಂವಹನ ಇಂದಿನ ಕಾಲದಲ್ಲಿ ಉದ್ಯೋಗ ಪಡೆಯಲು ತುಂಬಾ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಪದವಿ ವಿಭಾಗದಲ್ಲಿ ಹೊಸ ಕೋರ್ಸ್ ಗಳನ್ನು ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಈ ಕೋರ್ಸ್ಗಳಲ್ಲಿ ದಾಖಲಾಗಿ ಉದ್ಯೋಗಗಳನ್ನು ಪಡೆದುಕೊಳ್ಳಬೇಕು. ಪೋಷಕರು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಲಕ್ಷಾಂತರ ರೂಪಾಯಿಗಳನ್ನು ಕೊಟ್ಟು ಖಾಸಗಿ ಕಾಲೇಜುಗಳಿಗೆ ದಾಖಲು ಮಾಡುತ್ತಾರೆ. ಇದರಿಂದ ಪೋಷಕರಿಗೆ ಆರ್ಥಿಕ ಸಂಕಷ್ಟವಾಗುತ್ತದೆ. ಸರ್ಕಾರಿ ಕಾಲೇಜುಗಳಲ್ಲೂ ಉತ್ತಮ ಶಿಕ್ಷಣ, ನುರಿತ ಭೋದಕರು ಇದ್ದು ಗುಣಮಟ್ಟದ ಶಿಕ್ಷಣ ತಮ್ಮ ಮಕ್ಕಳಿಗೆ ದೊರೆಯಲಿದೆ. ಆದ್ದರಿಂದ ಖಾಸಗಿ ಕಾಲೇಜುಗಳ ಮೊರೆ ಹೋಗದೇ ಸರ್ಕಾರಿ ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಎಂದರು.

Education – ಖಾಸಗಿ ಕಾಲೇಜುಗಳಂತೆ ಪ್ರಚಾರ ಮಾಡಿ:
ಇನ್ನೂ ತಮ್ಮ ಕಾಲೇಜುಗಳಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿದೆ ಎಂಬುದರ ಬಗ್ಗೆ ಖಾಸಗಿ ಕಾಲೇಜು ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುತ್ತವೆ. ಅದೇ ರೀತಿ ಸರ್ಕಾರಿ ಕಾಲೇಜುಗಳು ಸಹ ಸೋಷಿಯಲ್ ಮಿಡಿಯಾ, ಫ್ಲೆಕ್ಸ್ ಸೇರಿದಂತೆ ಹಲವು ರೀತಿಯಲ್ಲಿ ಕಾಲೇಜಿನ ಬಗ್ಗೆ ಮಾಹಿತಿ ಎಲ್ಲರಿಗೂ ತಿಳಿಸಬೇಕು ಎಂದರು.
Education – ಶೀಘ್ರದಲ್ಲೇ 2 ಸಾವಿರ ಉಪನ್ಯಾಸಕರ ನೇಮಕ:
ಇನ್ನೂ ಮುಖ್ಯಮಂತ್ರಿಗಳು ಕಾಲೇಜು ವಿಭಾಗದಲ್ಲಿ 2 ಸಾವಿರ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುಮೋದನೆ ನೀಡಿದ್ದಾರೆ. ಈ ಪ್ರಕ್ರಿಯೆ ಕೊಂಚ ತಡವಾಗುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಪಾಠ ಪ್ರವಚನಗಳನ್ನು ಮಾಡಲಾಗುತ್ತಿದೆ. ಉಪನ್ಯಾಸಕರು ಸಹ ತಾವು ತೆಗೆದುಕೊಳ್ಳುವ ಸಂಬಂಳಕ್ಕೆ ನ್ಯಾಯ ಮಾಡಬೇಕು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದರು.
ಹೊಸ ಕೋರ್ಸ್ ಗಳ ಆರಂಭಕ್ಕೆ ಅವಕಾಶ: ಗುಡಿಬಂಡೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಬಿಎ, ಬಿ.ಎಸ್.ಸಿ ಸೇರಿದಂತೆ ಹಲವು ಹೊಸ ಕೋರ್ಸ್ಗಳ ಆರಂಭಕ್ಕಾಗಿ ಮನವಿ ಬಂದಿದ್ದು, ಅದರಂತೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಆರಂಭಿಸಲು ಕ್ರಮ ತೆಗೆದುಕೊಳ್ಳಬೇಕೆಂದು ವೇದಿಕೆಯಲ್ಲಿದ್ದ ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
Education – 5 ಸಾವಿರ ಬಸ್ ಗಳ ಖರೀದಿ:
ಹಿಂದಿನ ಸರ್ಕಾರದಲ್ಲಿ ಬಸ್ ಗಳನ್ನು ಖರೀದಿ ಮಾಡಿಯೇ ಇರಲಿಲ್ಲ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸುಮಾರು 5 ಸಾವಿರ ಹೊಸ ಬಸ್ ಗಳನ್ನು ಖರೀದಿ ಮಾಡಲಾಗಿದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ. ಜೊತೆಗೆ ನಮ್ಮ ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ತುಂಬಾನೆ ಅನುಕೂಲವಾಗಿದೆ ಎಂದರು.
Read this also : ಸಚಿವ ಸಂಪುಟ ವಿಸ್ತರಣೆ ಸುದ್ದಿ ಮಾಧ್ಯಮಗಳ ಸೃಷ್ಟಿಯಷ್ಟೆ: ಸಚಿವ ಸುಧಾಕರ್
Education – ಶಿಕ್ಷಣಕ್ಕೆ ಆದ್ಯತೆ
ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ. ನನ್ನ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಹಾಗೂ ಆರೋಗ್ಯಕ್ಕೆ ನನ್ನ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಹೊಸ ಕಾಲೇಜುಗಳಾಗಲಿ, ಕೋರ್ಸ್ಗಳಾಗಲಿ ತರುವುದು ನನ್ನ ಮೊದಲ ಕರ್ತವ್ಯವಾಗಿದೆ. ಈಗಾಗಲೇ ಶೀಕ್ಷಣಕ್ಕೆ ಸಂಬಂಧಿಸಿದಂತೆ ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ 7 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಸರ್ಕಾರಿ ಪದವಿ ಕಾಲೇಜಿನಲ್ಲಿ ಕೈಗೊಳ್ಳಲಾಗಿದೆ. ಜೊತೆಗೆ ಸಚಿವರಿಗೆ ಹೊಸ ಕೋರ್ಸ್ಗಳ ಆರಂಭಕ್ಕೆ ಮನವಿ ನೀಡಲಾಗಿದೆ. ಅವು ಸಹ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭವಾಗುವ ಭರವಸೆ ಇದೆ. ಶಿಕ್ಷಣಕ್ಕೆ ಸಂಬಂಧಪಟ್ಟ ಏನೆ ಸಮಸ್ಯೆಗಳಿದ್ದರೂ ನನ್ನ ಬಳಿ ತೆಗೆದುಕೊಂಡು ಬನ್ನಿ ನಾನು ಬಗೆಹರಿಸುತ್ತೇನೆ ಎಂದರು.
ಈ ಸಮಯದಲ್ಲಿ ಗುಡಿಬಂಡೆಯಿಂದ ಬೆಂಗಳೂರಿಗೆ ಹೊಸದಾದ ಅಶ್ವಮೇದ ಬಸ್ ಸಾರಿಗೆ ಸಂಪರ್ಕಕ್ಕೆ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಸೇರಿದಂತೆ ಗಣ್ಯರು ಚಾಲನೆ ನೀಡಿದರು. ಈ ವೇಳೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶ್ರೀಕರ, ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇ.ಒ ನಾಗಮಣಿ, ಪ.ಪಂ ಅಧ್ಯಕ್ಷ ವಿಕಾಸ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ, ಪ್ರಥಮ ದರ್ಜೆ ಕಾಲೇಜಿನ ಅಫ್ಜಲ್ ಬಿಜಿಲಿ, ಕೃಷ್ಣಪ್ಪ, ನಯಾಜ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.