ಬಾಗೇಪಲ್ಲಿ : ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಮರಗಳಿಗೆ ಕತ್ತರಿ ಹಾಕಿದರೆ ಮುಂದಿನ ದಿನಗಳಲ್ಲಿ ಪ್ರಕೃತಿ ಇಡೀ ಮನುಕುಲವನ್ನೇ ನಾಶ ಮಾಡುವುದು ಖಚಿತ. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಕಾಡನ್ನು ಉಳಿಸಿಬೆಳೆಸುವುದಕ್ಕೆ ಪ್ರತಿಯೊಬ್ಬ ನಾಗರೀಕರು ಕೈಜೋಡಿಸಬೇಕಾದ ಅಗತ್ಯವಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಾದೇಶಿಕ ಅರಣ್ಯ, ಸಾಮಾಜಿಕ ಅರಣ್ಯ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದೊಂದಿಗೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಅಭಿಯಾನಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪರಿಸರ ಭೂಮಿ ಮೇಲೆ ವಾಸಿಸುವ ಪ್ರಾಣಿ, ಪಕ್ಷಿಗಳು ಸೇರಿದಂತೆ ಮನುಷ್ಯನಿಗೆ ಅಗತ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಪ್ರಕೃತಿ ನೀಡಿದೆ ಆದರೆ ಇದಕ್ಕೆ ವಿರುದ್ದವಾಗಿ ಮನುಷ್ಯ ದುರಾಸೆಯಿಂದ ಮರಗಳನ್ನು ಕಡಿದು ಕಾಡನ್ನು ನಾಶ ಮಾಡುವಂತಹ ಕೆಲಸಕ್ಕೆ ಮುಂದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಪರಿಸರ ಇಲ್ಲದಿದ್ದರೆ ಈ ಭೂಮಿಯಲ್ಲಿ ಯಾವುದೇ ಜೀವಿ ಬದುಕಿ ಉಳಿಯಲು ಸಾಧ್ಯವಿಲ್ಲ, ಮುಂದಿನ ಪೀಳಿಯ ಉತ್ತಮ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ, ತಮ್ಮ ಸುತ್ತಮುತ್ತಲಿನಲ್ಲಿ ಗಿಡಗಳನ್ನು ಬೆಳೆಸುವಂತಹ ಕೆಲಸಕ್ಕೆ ಮುಂದಾಗುವ ಮೂಲಕ ವಿನಾಶದ ಅಂಚಿನಲ್ಲಿ ಕಾಡನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರು ಕೈಜೋಡಿಸಬೇಕೆಂದ ಅವರು ಪರಿಸರದ ಬಗ್ಗೆ ನಿರ್ಲಕ್ಷ್ಯತೋರಿದರೆ, ಮರಗಳಿಗೆ ಕತ್ತರಿ ಹಾಕಿದರೆ ಮುಂದಿನ ದಿನಗಳಲ್ಲಿ ಪ್ರಕೃತಿಯ ವಿಕೋಪಕ್ಕೆ ಮನುಷ್ಯ ಸೇರಿದಂತೆ ಭೂಮಿ ಮೇಲೆ ಜೀವಿಸುವ ಯಾವುದೆ ಜೀವಸಂಕುಲ ಬಲಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಪ್ರಶಾಂತ್ ಕೆ ಪಾಟಿಲ್, ಇಒ ರಮೇಶ್ ಕುಮಾರ್, ಬಿಇಒ ತನುಜಾ, ಟಿಹೆಚ್‍ಓ ಡಾ.ಸತ್ಯನಾರಾಯಣರೆಡ್ಡಿ, ಪ್ರಾದೇಶಿಕ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು, ಪಕ್ಷದ ಮುಖಂಡರಾದ ಮಹಮ್ಮದ್ ನೂರುಲ್ಲಾ, ನರೇಂದ್ರ ಬಾಬು ಸೇರಿದಂತೆ ವಿವಿಧ ಇಲಖೆ ಅಧಿಕಾರಿಗಳು ಇದ್ದರು.