Dalith Protest : ನಿವೇಶನ, ಭೂಮಿ ಮಂಜೂರು, ಮೂಲಭೂತ ಸೌಕರ್ಯಗಳು, ದಲಿತರ ಮೇಲಿನ ದೌರ್ಜನ್ಯಗಳು ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕು ಕಚೇರಿಯ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ತಮ್ಮ ಬೇಡಿಕೆಗಳನ್ನು ಈಡೇರಿಸದೇ ಇದ್ದ ಪಕ್ಷದಲ್ಲಿ ಉಗ್ರ ರೂಪದ ಹೋರಾಟಕ್ಕೆ ಮುಂದಾಗುವುದಾಗಿ ದಲಿತ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಈ ಸಮಯದಲ್ಲಿ ದಸಂಸ ಖಜಾಂಚಿ ಜಿ.ವಿ.ಗಂಗಪ್ಪ ಮಾತನಾಡಿ, ಕಳೆದೆರಡು ದಿನಗಳಿಂದ ನ್ಯಾಯಪರವಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸುತ್ತಿದೆ. ನಮ್ಮ ಬೇಡಿಕೆಗಳು ಇಲ್ಲಿಯೇ ಈಡೇರುವ ತನಕ ಹೋರಾಟವನ್ನು ಮುಂದುವರೆಸುತ್ತೇವೆ. ದಸಂಸ ಜಿಲ್ಲಾ ಘಟಕದ ಸೂಚನೆಯಂತೆ ನಮ್ಮ ಹೋರಾಟ ಮುಂದುವರೆಯುತ್ತಿದೆ. ನಮ್ಮ ಪ್ರಮುಖ ಬೇಡಿಕೆಗಳಾದ ದಲಿತರಿಗೆ ನಿವೇಶನಗಳು, ತಾಲೂಕಿನ ವ್ಯಾಪ್ತಿಯಲ್ಲಿ ಫಾರಂ ನಂ 50,53,57 ರಲ್ಲಿ ಅರ್ಜಿ ಸಲ್ಲಿಸಿದ ದಲಿತರಿಗೆ ಭೂಮಿ ನೀಡುವುದು, ಮಾಚಹಳ್ಳಿ ಗ್ರಾಮದ ವಡ್ಡರ ನಾರಾಯಣಪ್ಪ ಎಂಬುವವರ ಅಮಾನಿ ಬೈರಸಾಗರ ಸ..ನಂ.474 ಕ್ಕೆ ಸಂಬಂಧಿಸಿದಂತೆ ಆಗಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಿ, ನ್ಯಾಯ ದೊರಕಿಸುವುದು, ಸೋಮಲಾಪುರ ಗ್ರಾಮದಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಭೂಮಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ರೀತಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ತಾ.ಪಂ ಇ.ಒ ನಾಗಮಣಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ ರವರು ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದರು. ತಮ್ಮ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತಾವುಗಳು ಈ ಪ್ರತಿಭಟನೆಯನ್ನು ಕೈಬಿಡಬೇಕೆಂದು ಮನವಿ ಮಾಡಿದರು. ಆದರೆ ಅಧಿಕಾರಿಗಳ ಮಾತುಗಳಿಗೆ ಒಪ್ಪದ ಪ್ರತಿಭಟನಾಕಾರರು, ನಮ್ಮ ಬೇಡಿಕೆಗಳನ್ನು ಈಡೇರಿಸುವ ತನಕ ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ತಿಳಿಸಿದರು.
ಈ ಸಮಯದಲ್ಲಿ ದಲಿತ ಮುಖಂಡರಾದ ಇಸ್ಕೂಲಪ್ಪ, ರಾಜು, ನರಸಿಂಹಪ್ಪ, ಆದಿನಾರಾಯಣಪ್ಪ, ನಾರಾಯಣಪ್ಪ, ಕೆ.ಎನ್.ನರಸಿಂಹಪ್ಪ ಸೇರಿದಂತೆ ಹಲವರು ಇದ್ದರು.