ದಕ್ಷಿಣ ಕನ್ನಡ (Dakshina Kannada) ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಮಹತ್ವದ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆ ಮಂಗಳೂರಿನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಗಣೇಶೋತ್ಸವ, ಕೃಷ್ಣ ಜನ್ಮಾಷ್ಟಮಿ ಹಬ್ಬ ಸಮೀಪಿಸುತ್ತಿದ್ದಂತೆ ಈ ಸುತ್ತೋಲೆ ವಿವಾದ ಸೃಷ್ಟಿಸಿದೆ. ಈ ಆದೇಶದಂತೆ ಮಂಗಳೂರಿನ ಶಾಲಾ ಮೈದಾನಗಳಲ್ಲಿ ಗಣೇಶ ಉತ್ಸವ ಹಾಗೂ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಬ್ರೇಕ್ ಬೀಳಲಿದೆಯೆ ಎಂಬ ಅನುಮಾನ ಉದ್ಬವಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕ ಕಚೇರಿಯಿಂದ ಹೊಸ ಸುತ್ತೋಲೆ ಹೊರಡಿಸಲಾಗಿದೆ. ಶಾಲಾ ಮೈದಾನ ಅಥವಾ ಆವರಣವನ್ನು ಶೈಕ್ಷಣಿಕೇತರ ಚಟುವಟಿಕೆ ಉದ್ದೇಶಗಳಿಗೆ ಬಳಸಬಾರದು ಎಂದು ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಜೊತೆಗೆ ಅನುಮತಿ ಪಡೆಯಲು ಶಿಕ್ಷಣ ಇಲಾಖೆಗೆ ಪ್ರಸ್ತಾವನೆಗಳನ್ನು ಸಹ ಸಲ್ಲಿಸಬಾರದು ಎಂದು ಸೂಚನೆ ಸಹ ನೀಡಿದೆ. ಗಣೇಶ ಉತ್ಸವ ಹಾಗೂ ಶ್ರೀಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿರುವ ಸಮಯದಲ್ಲೇ ಈ ರೀತಿಯ ಸುತ್ತೋಲೆ ಹೊರಡಿಸಿರುವುದು ಇದೀಗ ಹಿಂದೂ ಸಂಘಟನೆಗಳ ಆಕ್ರೋಷಕ್ಕೆ ಕಾರಣವಾಗಿದೆ.
ಇನ್ನೂ ಸುತ್ತೋಲೆಯಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ಹೊರತು ಪಡಿಸಿ ಬೇರೆ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡಬಾರದು, ಒಂದು ವೇಳೆ ಅನುಮತಿ ನೀಡಿದರೇ ಸಂಬಂಧಿಸಿದ ಶಾಲಾ ಮುಖ್ಯಸ್ಥರೇ ನೇರ ಹೊಣೆಗಾರರಾಗುತ್ತಾರೆ ಎಂದು ದಕ್ಷಿಣ ಕನ್ನಡ ಉಪ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ. ಇದೀಗ ಈ ಸುತ್ತೋಲೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬ್ರೇಕ್ ಬೀಳುವಂತಹ ಸಾದ್ಯತೆಯಿದ್ದು, ಈ ಸುತ್ತೋಲೆಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಮಾರು ವರ್ಷಗಳಿಂದ ಈ ಭಾಗದ ಹಲವು ಸರ್ಕಾರಿ ಶಾಲಾ ಮೈದಾನಗಳಲ್ಲಿ ಗಣೇಶ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ಶಿಕ್ಷಣ ಇಲಾಖೆಯ ಹೊಸ ಆದೇಶದಿಂದ ಗಣೇಶೋತ್ಸವದ ಆಚರಣೆಗೆ ಬ್ರೇಕ್ ಹಾಕಲು ಮುಂದಾಗಿದೆ ಎನ್ನಲಾಗಿದೆ. ಇನ್ನೂ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಒತ್ತಾಯಿಸಿದ್ದಾರೆ. ಜೊತೆಗೆ ರಾಜಕೀಯ ಪಕ್ಷಗಳ ಜಟಾಪಟಿಗೂ ಕಾರಣವಾಗಬಹುದು ಎನ್ನಲಾಗಿದೆ.