NEET Exam: ನೀಟ್ ಪರೀಕ್ಷೆ ರದ್ದು, ನೀಟ್ ಹಗರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆಗೆ ಸಿಪಿಎಂ ಒತ್ತಾಯ

ಬಾಗೇಪಲ್ಲಿ:  ನೀಟ್ ಪರೀಕ್ಷಾ (NEET Exam) ಪದ್ದತಿ ವಾಪಸ್ ಪಡೆಯುವಂತೆ ಹಾಗೂ ನೀಟ್ ಹಗರಣದ ನೇರ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವರು ರಾಜೀನಾಮೆ ನೀಡುವಂತೆ  ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಮಂಗಳವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ, ನೀಟ್ ಪರೀಕ್ಷೆಯಲ್ಲಿ ಹಗರಣ (NEET Exam) ನಡೆದ ಹಿನ್ನಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸು ನುಚ್ಚುನೂರಾಗಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿಯೇ ಅತೀ ದೊಡ್ಡ ಹಗರವಾಗಿದ್ದು ಇದರ ನೇರ ಹೊಣೆಯನ್ನು ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

CPIM protest for NEET exam 0

ಶಿಕ್ಷಣದ ಕೇಂದ್ರೀಕರಣ, ವಾಣಿಜ್ಯೀಕರಣ, ಕೋಮವಾದವನ್ನು ಪ್ರತಿಪಾದಿಸುವ  ಎನ್.ಇ.ಪಿ 2020 ಗೆ ಸಿಪಿಐ(ಎಂ) ತೀವ್ರವಾಗಿ ವಿರೋಧಿಸುತ್ತಾ ಬಂದಿದೆ ಎಂದ ಅವರು ಜುಲೈ 1ರಿಂದ ಜಾರಿಗೆ ತಂದಿರುವ   ಹೊಸ ಪ್ರಜಾಪ್ರಭುತ್ವ ವಿರೋಧಿ ಹಾಗೂ ಜನ ವಿರೋಧಿ ಕ್ರಿಮಿನಲ್ ಕಾನೂನನ್ನು ವಾಪಸ್ ಪಡೆಯಬೇಕು, ನೀಟ್ ಪರೀಕ್ಷೆ (NEET Exam)ರದ್ದುಗೊಳಿಸಬೇಕು, ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ  ಮತಾಂಧರ ದಾಳಿ ನಿಲ್ಲಿಸಬೇಕು, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ವಾಪಸ್ ಪಡೆಯುವಂತೆ ಹಾಗೂ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ) ಪಕ್ಷದ ಮುಖಂಡರಾದ ಮುನಿವೆಂಕಟಪ್ಪ, ಕೃಷ್ಣಪ್ಪ, ಅಶ್ವಥಪ್ಪ, ಚೆನ್ನರಾಯಪ್ಪ, ನರಸಿಂಹರೆಡ್ಡಿ, ಸೋಮಶೇಖರ್, ರಾಮಲಿಂಗಪ್ಪ, ಅಂಜಿನಪ್ಪ, ಸಾವಿತ್ರಮ್ಮ, ನಾಗಪ್ಪ ಶ್ರೀನಿವಾಸ್, ನಾಗರಾಜ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Scroll to Top