ಯಾರಾದರೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೇ ನಮಗೆ ತಿಳಿಸಿ ನಾವೇ ಅವರನ್ನು ಗುಂಡಿಕ್ಕಿ ಸಾಯಿಸುತ್ತೇವೆ ಎಂದು ಕೊಪ್ಪಳದಲ್ಲಿ ಇತ್ತೀಚಿಗೆ ನಡೆದ ಚುನಾವಣಾ ಪ್ರಚಾರದಲ್ಲಿ ಸಚಿವ ಜಮೀರ್ ಅಹಮದ್ ನುಡಿದಿದ್ದಾರೆ. ಪಾಕ್ ಜಿಂದಾಬಾದ್ ಎಂದರೇ ಸರ್ಕಾರಕ್ಕೆ ತಿಳಿಸಿ ಅವರನ್ನು ಗಲ್ಲಿಗೇರಿಸೊಲ್ಲ, ಬದಲಿಗೆ ನಾವೇ ಡಿಶುಂ ಡಿಶುಂ ಎಂದು ಗುಂಡಿಕ್ಕಿ ಹೊಡೆಯುತ್ತೇವೆ ಎಂದು ಮಾತನಾಡಿದ್ದಾರೆ. ಇದೀಗ ಜಮೀರ್ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕಳೆದ ಫೆ.27 ರಂದು ರಾಜ್ಯ ಸಭಾ ಚುನಾವಣೆಯಲ್ಲಿ ಜಯಗಳಿಸಿದ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸೀರ್ ಹುಸೇನ್ ಗೆದ್ದಿದ್ದರು. ಅವರು ಗೆಲ್ಲುತ್ತಿದ್ದಂತೆ ಅಲ್ಲಿದ್ದ ಅವರ ಬೆಂಬಲಿಗರು ವಿಜಯೋತ್ಸವ ಆಚರಿಸೋಕೆ ಶುರು ಮಾಡಿದರು. ಆಗ ವಿಧಾನಸೌಧದ ಎದುರೇ ಪಾಕ್ ಪರ ಜೈಕಾರ ಮೊಳಗಿತ್ತು. ಕಾಂಗ್ರೆಸ್ ನಾಯಕ ಹಾಗೂ ಕಾರ್ಯಕರ್ತರ ವರ್ತನೆಗೆ ಬರೀ ರಾಜ್ಯವಷ್ಟೇ ಅಲ್ಲ, ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆ ಸಮಯದಲ್ಲಿ ಏನು ಪ್ರತಿಕ್ರಿಯೆ ನೀಡದ ಜಮೀರ್ ಅಹ್ಮದ್ ಈಗ ಚುನಾವಣೆಯ ಸಮಯದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ರೆ ಗುಂಡಿಕ್ಕಿ ಕೊಲೆ ಮಾಡಿ ಎನ್ನುತ್ತಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಶುರುವಾಗಿದೆ. ಕೊಪ್ಪಳದ ಅಭ್ಯರ್ಥಿ ರಾಜಶೇಖರ್ ಹಿತ್ನಾಳ್ ಪರ ನಡೆದ ಪ್ರಚಾರದ ವೇಳೆ ಜಮೀರ್ ಅಬ್ಬರದ ಭಾಷಣ ಮಾಡಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗುವವರನ್ನು ಗುಂಡಿಕ್ಕಿ ಕೊಲ್ಲಬೇಕು. ಅಂತಹ ಅಧಿಕಾರ ಅಧಿಕಾರವನ್ನು ಪೊಲೀಸರಿಗೆ ಸರ್ಕಾರ ಕೊಡಬೇಕು. ಯಾರಾದ್ರೂ ಈ ರೀತಿಯ ಹೇಳಿಕೆ ಕೊಟ್ಟರೇ ಟಿಕಾ, ಟಿಕಾ, ಟಿಕಾ ಎಂದು ಶೂಟ್ ಮಾಡಬೇಕು ಎಂದು ಜಮೀರ್ ಹೇಳಿದ್ದಾರೆ. ಇದೀಗ ವೇದಿಕೆಯ ಮೇಲೆ ಜಮೀರ್ ನೀಡಿದ ಈ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇನ್ನೂ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯನಾಗಿ ಆಯ್ಕೆಯಾದ ಸಮಯದಲ್ಲಿ ನಡೆದ ಸಂಭ್ರಮಾಚರಣೆಯ ವೇಳೆ ಕೆಲವರು ಪಾಕಿಸ್ತಾನ್ ಪರ ಘೋಷಣೆ ಕೂಗಲಾದ ವಿಚಾರವನ್ನು ಅನೇಕ ಕಾಂಗ್ರೇಸ್ ನಾಯಕರು ಸಮರ್ಥನೆ ಮಾಡಿಕೊಂಡಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್ ದೀಪ್ ಸಿಂಗ್ ಸುಜೇವಾಲ್ ಸರಣಿ ಟ್ವೀಟ್ ಮಾಡಿ ಮಾದ್ಯಮದವರ ಮೇಲೆಯೇ ಆರೋಪಿಸಿದ್ದರು. ಸಚಿವ ಪ್ರಿಯಾಂಕ ಖರ್ಗೆ ಇದೆಲ್ಲಾ ಸುಳ್ಳು ಆರೋಪ ಎಂದಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 10 ವಿಡಿಯೋ ನೋಡಿದರೂ ಪಾಕ್ ಪರ ಘೋಷಣೆ ಕೇಳಿಸಿಲ್ಲ ಎಂದು ಹೇಳಿದ್ದರು. ಬಳಿಕ ಸರ್ಕಾರ ನಡೆಸಿದ ತನಿಖೆಯಲ್ಲಿ ಎಫ್.ಎಸ್.ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದು ಹೇಳಲಾಗಿತ್ತು. ಆಗ ಒಂದಿಬ್ಬರನ್ನು ಬಂಧಿಸಿ, ಬಳಿಕ ಬೇಲ್ ನೀಡುವ ಕೆಲಸವಾಗಿತ್ತು. ಆ ಸಮಯದಲ್ಲಿ ಮಾತನಾಡದಂತಹ ಜಮೀರ್ ಈ ಚುನಾವಣೆಯಲ್ಲಿ ಈ ಕುರಿತು ಮಾತನಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.