ರಾಜ್ಯ ಕಾಂಗ್ರೇಸ್ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (D.K Shivakumar) ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ಕೊಟ್ಟು, ಮಂಜುನಾಥನ ದರ್ಶನ ಪಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಾಥ್ ನೀಡಿದರು. ಮೈಸೂರಿನಿಂದ ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ನಾಯಕರು ಬಳಿಕ ರಸ್ತೆ ಮಾರ್ಗದ ಮೂಲಕ ಮಂಜುನಾಥನ ಸನ್ನಿಧಿಗೆ ಆಗಮಿಸಿದ್ದಾರೆ. ಧರ್ಮಸ್ಥಳದ ಪ್ರವೇಶ ದ್ವಾರದಲ್ಲಿ ವಾದ್ಯ ಘೋಷಗಳ ಸಿಎಂ ಹಾಗೂ ಡಿಕೆಶಿಗೆ ಭವ್ಯ ಸ್ವಾಗತ ಕೋರಲಾಯಿತು.
ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಬಾರಿ ಧರ್ಮಯುದ್ದ ಆರಭಿಸುವುದಕ್ಕೂ ಮುನ್ನಾ ಮಂಜುನಾಥನ ದರ್ಶನ ಪಡೆಯುತ್ತೇವೆ. ರಾಜ್ಯದಲ್ಲಿ ಮಳೆ ಆರಂಭವಾಗಿದೆ. ಬಹಳ ಸಂತೋಷವಾಗುತ್ತಿದೆ. ನಮ್ಮ ಧರ್ಮದ ಸಂಪ್ರದಾಯದಂತೆ ಧರ್ಮಸ್ಥಳಕ್ಕೆ ಬಂದಿದ್ದೇವೆ. ಮಾತು ಬಿಡದ ಮಂಜುನಾಥನಿಗೆ ನಮಸ್ಕಾರ ಹೇಳಲು ಸಿಎಂ ಸಿದ್ದರಾಮಯ್ಯರವರು ಬಂದಿದ್ದಾರೆ. ರಾಜ್ಯದ ಜನರ ಪರವಾಗಿ ಹಾಗೂ ವೈಯುಕ್ತಿಕವಾಗಿ ಪ್ರಾರ್ಥನೆ ಮಾಡಿದ್ದಾರೆ. ರಾಜ್ಯದಲ್ಲಿ ಮಳೆ ಹಾಗೂ ಬೆಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥನೆ ಮಾಡಿದ್ದಾರೆ. ಶಕ್ತಿ ಯೋಜನೆಯಿಂದ ಸಾವಿರಾರು ಜನರು ಧರ್ಮಸ್ಥಳಕ್ಕೆ ಬರುತ್ತಿದ್ದಾರೆ ಎಂದು ಡಾ.ವೀರೆಂದ್ರ ಹೆಗಡೆಯವರು ಹೇಳಿದ್ದರು. ದೇವಾಲಯದ ಒಳಗೂ ಹೆಣ್ಣುಮಕ್ಕಳು ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಿದ್ದರಾಮಯ್ಯರವರಿಗೆ ತಿಳಿಸಿದರು. ಅವರೆಲ್ಲರ ಪ್ರಾರ್ಥನೆಯಿಂದ ನಮ್ಮ ಸರ್ಕಾರಕ್ಕೆ ಮತಷ್ಟು ಶಕ್ತಿ ಬಂದಿದೆ ಎಂದು ಹೇಳಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಂತೆ ಪೂರ್ಣಕುಂಭ, ವಾದ್ಯಘೋಷಗಳೊಂದಿಗೆ ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸಿದರು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ರವರು ಮುಖ್ಯ ದ್ವಾರದಿಂದ ನಡೆದುಕೊಂಡು ದೇವಸ್ಥಾನದ ಒಳಗೆ ಪ್ರವೇಶಿಸಿದರು. ಈ ವೇಳೆ ಪ್ರವೇಶದ ವೇಳೆ ಸಾಲಿನಲ್ಲಿದ್ದ ಸಾವಿರಾರು ಸಂಖ್ಯೆಯ ಭಕ್ತರು ಜೈ ಶ್ರೀರಾಮ್ ಘೋಷಣೆ ಕೂಗಿದರು. ಜೊತೆಗೆ ಪ್ರಧಾನಿ ಮೋದಿಗೂ ಜೈ ಎಂದು ಆಪ್ ಕಿ ಬಾರ್ ಮೋದಿ ಸರ್ಕಾರ್ ಎಂದು ಘೋಷಣೆ ಕೂಗಿದರು. ಇನ್ನೂ ಸಿಎಂ ಆಗಮನದ ಕಾರಣ ದೇವಸ್ತಾನದ ಭಕ್ತರಿಗೆ ಸುಮಾರು ಅರ್ಧ ಗಂಟೆ ನಿರ್ಬಂಧ ಹೇರಲಾಗಿತ್ತು. ಆದರೆ ಗಂಟೆ ಕಾದರೂ ಸಹ ಸಿಎಂ, ಡಿಸಿಎಂ ಆಗಮಿಸಿದ ಹಿನ್ನೆಲೆ ಭಕ್ತರು ಪೊಲೀಸ್ ಇಲಾಖೆ ಹಾಗೂ ಸಿಎಂ ವಿರುದ್ದ ಆಕ್ರೋಷ ಹೊರಹಾಕಿದರು.