Survey – ಸರ್ಕಾರದಿಂದ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸಿ, ಸಮೀಕ್ಷೆದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸಮೀಕ್ಷೆಗೆ ನೇಮಕಗೊಂಡ ಶಿಕ್ಷಕರು ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಹಸೀಲ್ದಾರ್ ಸಿಗ್ಬತ್ತುಲ್ಲಾ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಎನ್.ಶಂಕರಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.

Survey – ಸಮೀಕ್ಷೆ ನಡೆಸಲು ಹಲವು ಸಮಸ್ಯೆಗಳು
ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಗುಡಿಬಂಡೆ ತಾಲೂಕು ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಸರ್ಕಾರದಿಂದ ಸೂಚನೆ ನೀಡಿದಂತಹ ಎಲ್ಲಾ ಸಮೀಕ್ಷೆಗಳನ್ನು ನಮ್ಮ ಶಿಕ್ಷಕರು ಪ್ರಮಾಣಿಕವಾಗಿ ನಿರ್ವಹಿಸಿದ್ದಾರೆ. ಇದೀಗ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಸಹ ಮಾಡಲು ಶಿಕ್ಷಕರು ಸಮರ್ಥರಾಗಿದ್ದಾರೆ. ಆದರೆ ಈ ಸಮೀಕ್ಷೆ ಮಾಡುವಾಗ ನಮ್ಮ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೇ ಮನೆ ಸಮೀಕ್ಷೆ ನಾಲ್ಕೈದು ಸಮೀಕ್ಷೆದಾರರ ಮೊಬೈಲ್ ನಲ್ಲಿ ತೋರಿಸುತ್ತಿದೆ. ಜೊತೆಗೆ ಸಮೀಕ್ಷೆಯ ಪರದಿ ಸಹ ಸರಿಯಾಗಿ ನಿಗಧಿಪಡಿಸಿಲ್ಲ. ಬೇರೆ ತಾಲೂಕುಗಳೂ ಸಹ ಗುಡಿಬಂಡೆ ತಾಲೂಕಿನ ಸಮೀಕ್ಷೆದಾರರಿಗೆ ಸಿಕ್ಕಿದೆ. ಇದರಿಂದ ಸಮೀಕ್ಷೆ ಮಾಡುವಂತಹವರಿಗೆ ತುಂಬಾನೆ ಕಷ್ಟಕರವಾಗಿದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸಿ ಅನುಕೂಲ ಮಾಡಿಕೊಡಬೇಕೆಂದರು.
Survey – ಸಮಸ್ಯೆಗಳನ್ನು ಬಗೆಹರಿಸಲು ಕ್ರಮದ ಭರವಸೆ
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪ್ರಮಾಣಿಕವಾಗಿ ಹಾಗೂ ನಿಖರವಾದ ಮಾಹಿತಿಯನ್ನು ನೊಂದಾಯಿಸಬೇಕು. ಸಮೀಕ್ಷೆದಾರರು ಇದೀಗ ನೀಡಿರುವಂತಹ ಮನವಿಯನ್ನು ಸರ್ಕಾರಕ್ಕೆ ಕಳುಹಿಸುತ್ತೇವೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ಅನುಕೂಲ ಮಾಡಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಸಮೀಕ್ಷೆ ಮಾಡುವವರು ಗೊಂದಲಕ್ಕೆ ಗುರಿಯಾಗಬೇಡಿ, ಸಮೀಕ್ಷೆ ಮಾಡುವುದನ್ನು ನಿಲ್ಲಿಸಬೇಡಿ ಎಂದರು.
Read this also : ಚಿಕ್ಕಬಳ್ಳಾಪುರ ಪೊಲೀಸರಿಂದ ಹೊಸ ಹೆಜ್ಜೆ: ‘ಮನೆ ಮನೆಗೆ ಪೊಲೀಸ್’ ಗಸ್ತು ಯೋಜನೆ ಜಾರಿ
Survey – ಪ್ರಮುಖ ಬೇಡಿಕೆಗಳು
ಶಿಕ್ಷಕರಿಗೆ ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ಬಿಟ್ಟು ಬೇರೆ ಪ್ರದೇಶಗಳಿಗೆ ನಿಯೋಜನೆ ಮಾಡಿರುವುದು, ಅವೈಜ್ಞಾನಿಕ ಮನೆಗಳ ಸಂಖ್ಯೆ ಮ್ಯಾಪಿಂಗ್, ಮ್ಯಾಪಿಂಗ್ ಮಾಡಲಾದ ಪ್ರದೇಶ ಬಿಟ್ಟು ಇತರೆ ತಾಲೂಕುಗಳ ಮನೆಗಳ ಮ್ಯಾಪಿಂಗ್ ಮಾಡಿರುವುದು, UHID ಸಂಖ್ಯೆಗಳು ಹೊಂದಾಣಿಕೆಯಾಗದೇ ಇರುವುದು, ಗಣತಿದಾರರಿಗೆ ಮನೆಗಳ ಪಟ್ಟಿ ನೀಡದೇ ಇರುವುದು, ಆಪ್ ಗಳಲ್ಲಿ ಸರಿಯಾಗಿ ಒಟಿಪಿ ಬರದೇ ಇರುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು. ಈ ವೇಳೆ ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ನೇಮಕ ಮಾಡಿರುವ ಸಮೀಕ್ಷೆದಾರರು ಹಾಗೂ ನೌಕರರ ಸಂಘದ ಪದಾಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

