ಬಾಗೇಪಲ್ಲಿ: ನೀಟ್ ಪರೀಕ್ಷೆ ಏಕಾಏಕಿಯಾಗಿ ರದ್ದುಪಡಿಸಿ ಮುಂದೂಡಿರುವುದು ಕೇಂದ್ರ ಸರ್ಕಾರದ ವೈಫಲ್ಯವಾಗಿದೆ ಇದಕ್ಕೆ ಕೇಂದ್ರ ಸರ್ಕರವೇ ಉತ್ತರ ನೀಡಬೇಕಾಗಿದೆ. ವೈದ್ಯರಾಗುವ ಕನಸು ಕಂಡಿದ್ದ ಲಕ್ಷಾಂತರ ವಿದ್ಯಾರ್ಥಿಗಳ ಜೀವನದೊಂದಿಗೆ ಚಲ್ಲಾಟವಾಡುತ್ತಿರುವ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಹೊರವಲಯದ ಸುಂಕಲಮ್ಮ ದೇವಾಲಯದ ಸಮೀಪದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಏರ್ಪಡಿಸಲಾಗಿದ್ದ ಲೋಕಸಭಾ ಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಮತಗಳನ್ನು ಪಡೆಯಲು ಶ್ರಮಿಸಿದ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತಾ ಸಮಾರಂಭ ಹಾಗೂ ಔತಣಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೀಟ್ ಪರೀಕ್ಷೆ ಇಂದು ನಿಗಧಿಯಾಗಿತ್ತು ಆದರೆ ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ನೀಟ್ ಪರೀಕ್ಷೆಯನ್ನು ಮುಂದೂಡಿದ ಪರಿಣಾಮ ಲಕ್ಷಾಂತರ ವಿದ್ಯಾರ್ಥಿಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ವೈದ್ಯಕೀಯ ವ್ಯಾಸಂಗಕ್ಕಾಗಿ ಲಕ್ಷಾಂತರ ವಿದ್ಯಾರ್ಥಿಗಳು ಹಲವು ತಿಂಗಳುಗಳಿಂದ ತಯಾರಿ ನಡೆಸಿಕೊಂಡಿರುತ್ತಾರೆ ದಿಢೀರ್ ಆಗಿ ಪರೀಕ್ಷೆ ರದ್ದುಗೊಳಿಸಿ ಮುಂದೂಡಿದರೆ ಹೇಗೆ ಎಂದು ಪ್ರಶ್ನಿಸಿದ ಅವರು ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿವಾದಾತ್ಮಕ ಫಲಿತಾಂಶದಿಂದ ದೇಶದ ಲಕ್ಷಾಂತರ ವೈದ್ಯಕೀಯ ಶಿಕ್ಷಣದ ಆಕಾಂಕ್ಷಿ ವಿದ್ಯಾರ್ಥಿಗಳು ಅಘಾತಕ್ಕೆ ಒಳಗಾಗಿದ್ದಾರೆ, ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಕೇಂದ್ರ ಸರ್ಕಾರ ಕೂಡಲೇ ಮುಂದಾಗಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಪಡೆದಿದ್ದೇವೆ ಆದರೆ ನಮ್ಮ ಪಕ್ಷ ಸೋಲು ಅನುಭವಿಸಿದೆ. ಯಾವುದೇ ಚುನಾವಣೆಯಲ್ಲಿ ಸೋಲು ಗೆಲುವು ಸಹಜ ಆದರೆ ಮುಂದಿನ ಚುನಾವಣೆಗಳಲ್ಲಿ ಹೇಗೆ ಎದುರಿಸಬೇಕೆಂದು ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಜೊತೆ ಸಮಾಲೋಚನೆ ನಡೆಸುವ ಅಲೋಚನೆಯಿಂದಾಗಿ ಇಂದು ಪಕ್ಷದ ಎಲ್ಲರಿಗೂ ಔತಣಕೂಟವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಭಾಗವಹಿಸುವ ಮೂಲಕ ಯಶಸ್ವಿಯಾಗಿದೆ ಇದಕ್ಕೆ ಪಕ್ಷದ ಎಲ್ಲರಿಗೂ ಅಭಿನಂಧನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಶಿವಶಂಕರರೆಡ್ಡಿ, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾರಾಮಯ್ಯ, ಜಿಲ್ಲಾಧ್ಯಕ್ಷ ಕೇಶವರೆಡ್ಡಿ, ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.