“ರಕ್ಷಣೆ ಮಾಡಬೇಕಾದ ಪೊಲೀಸರೇ ಹೀಗೆ ಮಾಡಿದರೆ ಹೇಗೆ?” ಎನ್ನುವ ಪ್ರಶ್ನೆ ಮೂಡಿಸುವಂತ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪೊಲೀಸ್ ಪೇದೆಯೊಬ್ಬರು ಮೋಜು ಮಸ್ತಿಯಲ್ಲಿ ಮುಳುಗಿ, ತಾನು ಇಟ್ಟುಕೊಳ್ಳಬೇಕಿದ್ದ ಸರ್ಕಾರಿ ರಿವಾಲ್ವರ್ ಅನ್ನೂ ಡ್ಯಾನ್ಸರ್ ಕೈಗಿತ್ತು ಎಡವಟ್ಟು ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಮೂವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.

Viral Video – ಏನಿದು ಘಟನೆ?
ಬಿಹಾರದ ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಂಪುರ ಬೈರಾಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪವನ್ ಸಾಹ್ನಿ ಎಂಬುವವರ ಮಗುವಿನ ಆರನೇ ದಿನದ ಶಾಸ್ತ್ರದ (ಛತ್ತಿಯಾರ್) ಸಂಭ್ರಮಾಚರಣೆ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಗೋಪಾಲಗಂಜ್‌ನ ಕುಚಾಯ್ ಕೋರ್ಟ್ ಪೊಲೀಸ್ ಠಾಣೆಯ ಪೇದೆ ಅಮಿತ್ ಚೌಧರಿ, ಭರ್ಜರಿ ಸ್ಟೆಪ್ಸ್ ಹಾಕುತ್ತಿದ್ದ ಡ್ಯಾನ್ಸರ್ ಕೈಗೆ ತನ್ನ ಪಿಸ್ತೂಲು ನೀಡಿದ್ದಾರೆ. ಆಕೆಯೂ ಕೂಡ ಆ ಗನ್ ಹಿಡಿದುಕೊಂಡು ಜನರ ಮಧ್ಯೆ ದರ್ಪದಿಂದ ಕುಣಿದಿದ್ದಾಳೆ.
Viral Video – ಗಾಳಿಯಲ್ಲಿ ಗುಂಡು, ಪ್ರಶ್ನಿಸಿದವರಿಗೆ ಏಟು!
ವಿಷಯ ಇಲ್ಲಿಗೆ ಮುಗಿಯಲಿಲ್ಲ. ಬುಧವಾರ ರಾತ್ರಿ ನಡೆದ ಈ ಪಾರ್ಟಿಯಲ್ಲಿ ಪೇದೆ ಅಮಿತ್ ಚೌಧರಿ ಕೇವಲ ಗನ್ ಕೊಟ್ಟು ಸುಮ್ಮನಾಗದೆ, ತಾನೇ ಸ್ವತಃ ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದಾರೆ. ಇದನ್ನು ಕಂಡು ಹೌಹಾರಿದ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೇದೆ ಅಮಿತ್, ಆತನ ಸಹೋದರ ಮಿಸಿರ್ ಚೌಧರಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅನ್ಮೋಲ್ ತಿವಾರಿ ಸೇರಿಕೊಂಡು ಗ್ರಾಮಸ್ಥರ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. Read this also : ಅಕ್ರಮ ಸಂಬಂಧದ ಅಮಲು: ಗಂಡನನ್ನೇ ಮುಗಿಸಲು ಸ್ಕೆಚ್ ಹಾಕಿದ ಪತ್ನಿ! ಕೊಲೆ ರಹಸ್ಯ ಬಯಲಾಗಿದ್ದು ಹೇಗೆ?
Viral Video – ಪೊಲೀಸರ ಕಠಿಣ ಕ್ರಮ
ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮುಫಸ್ಸಿಲ್ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತು ಅಮಿತ್ ಚೌಧರಿ, ಮಿಸಿರ್ ಚೌಧರಿ, ಅನ್ಮೋಲ್ ತಿವಾರಿ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಈ ಬಗ್ಗೆ ಮಾತನಾಡಿರುವ ಡಿಎಸ್‌ಪಿ ವಿವೇಕ್ ದೀಪ್, “ಸರ್ಕಾರಿ ಶಸ್ತ್ರಾಸ್ತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಶಿಸ್ತು ಉಲ್ಲಂಘನೆಯಾಗಿದೆ. ಆರ್ಮ್ಸ್ ಆಕ್ಟ್ ಸೇರಿದಂತೆ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆದಿದೆ.
