ಬಾಗೇಪಲ್ಲಿ: ಅನಾಧೆಯ ಮನೆ ದೌರ್ಜನ್ಯವಾಗಿ ನೆಲೆಸಮ ಮಾಡಿ 5 ದಿನಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ನ್ಯಾಯ ಒದಗಿಸುವಲ್ಲಿ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದಾರೆಂದು ಭೋವಿ ಸಂಘದ ಜಿಲ್ಲಾಧ್ಯಕ್ಷ ಪಿ.ಡಿ.ವೆಂಕಟರಾಮ್ ಆರೋಪಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1987ರಲ್ಲಿ ಪಟ್ಟಣದ 1ನೇ ವಾರ್ಡ್‍ನಲ್ಲಿ ಸರ್ವೆ ನಂ 156ರಲ್ಲಿ ಅರ್ಥ ಗುಂಟೆ ಜಾಗವನ್ನು ತಾಲೂಕಿನ ದೇವರೆಡ್ಡಿಪಲ್ಲಿ ಗ್ರಾಮದ ವಡ್ಡರ ನಾರಾಯಣಪ್ಪ ಎಂಬುವವರು ಎದುಲನ್ನ ಚಿನ್ನವೆಂಕಟಸ್ವಾಮಿ ರವರಿಂದ ಖರೀದಿ ಮಾಡಿ ಕಲ್ಲು ಬಂಡೆಗಳ ಮನೆ ನಿರ್ಮಿಸಿಕೊಂಡು ಕಳೆದ 40 ವರ್ಷಗಳಿಂದ ಈ ಮನೆಯಲ್ಲಿ ವಾಸವಾಗಿದ್ದರು. ನಾರಾಯಣಪ್ಪ ಮತ್ತು ವೆಂಕಟಲಕ್ಷ್ಮಮ್ಮ ರವರು ಮೃತಪಟ್ಟಿದ್ದು ಇವರಿಗೆ ಅಮೃತ ಎಂಬ ಮೊಮ್ಮಗಳು ಇದ್ದಾರೆ. ಅಮೃತ ರವರ ತಂದೆ ತಾಯಿ ಸಹ ಮೃತಪಟ್ಟಿದ್ದಾರೆ ಸದ್ಯಕ್ಕೆ ಇವರು ತನ್ನ ಸೊದರತ್ತೆ ರತ್ನಮ್ಮ ಎಂಬುವರ ಆಶ್ರಯದಲ್ಲಿ ಇದೇ ಮನೆಯಲ್ಲಿ ವಾಸವಾಗಿದ್ದಾರೆ. ಈ ಅನಾಧ ಹೆಣ್ಣು ಮಗು 10ನೇ ತರಗತಿ ಉತ್ರ್ತೀಣಳಾಗಿದ್ದಾಳೆ.
ಅಮೃತ ಮತ್ತು ರತ್ನಮ್ಮ ಮನೆಯಲ್ಲಿ ಇಲ್ಲದ ಸಮಯದಲ್ಲಿ ಜಿಲ್ಲಾಲಪಲ್ಲಿ ವೆಂಕಟರಾಮಪ್ಪ ಎಂಬುವವರು ನಮ್ಮ ಅತ್ತೆ ಮತ್ತು ಮಾವ ಈ ಆಸ್ಥಿ ಬರೆದುಕೊಟ್ಟಿದ್ದಾರೆ ಎಂದು ಬಂಡಿನಾರಾಯಣಪ್ಪ ಎಂಬುವವರಿಗೆ ಸೇರಿದ ಜೆಸಿಬಿ ಯಂತ್ರದ ಮೂಲಕ ದೌರ್ಜನ್ಯವಾಗಿ ವಾಸದ ಮನೆಯನ್ನು ನೆಲಸಮ ಮಾಡಿ ಅನಾಧೆ ಹೆಣ್ಣು ಮಕ್ಕಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಆದರೆ ಇದುವರೆವಿಗೂ ಈ ಘಟನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮಕೈಗೊಂಡಿಲ್ಲ ಅಲ್ಲದೆ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಥಳಕ್ಕೆ ಬೇಟಿ ನೀಡಿದೆ ನಿರ್ಲಕ್ಷ್ಯತೋರುತ್ತಿರುವ ಅಧಿಕಾರಿಗಳ ಕ್ರಮವನ್ನು ತೀವ್ರವಾಗಿ ಖಂಡಿಸಿದ ಅವರು 8 ದಿನಗಳಲ್ಲಿ ಅನಾಧೆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸದಿದ್ದಲ್ಲಿ ನಮ್ಮ ಸಮುದಾಯದವತಿಯಿಂದ ಬಾಗೇಪಲ್ಲಿ ಬಂದ್‍ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಮನೆ ಕಳೆದುಕೊಂಡಿರುವ ಅನಾಧೆ ಹೆಣ್ಣು ಮಗಳಾದ ರತ್ನಮ್ಮ ಮಾತನಾಡಿ, ನಾನು ಮತ್ತು ನಮ್ಮ ಅತ್ತೆ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆ ನೆಲಸಮ ಮಾಡಿ ಬೀರುವದಲ್ಲಿದ್ದ ಮನೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಸೇರಿದಂತೆ ಬಟ್ಟೆ ಇತ್ಯಾಧಿ ವಸ್ತುಗಳನ್ನು ಹಾಳು ಮಾಡಿ ಬೀರುವವನ್ನು ಗುಜರಿ ಅಂಗಡಿಗೆ ಹಾಕಿದ್ದಾರೆ. ಪೊಲೀಸರಿಗೆ ದೂರು ನೀಡಿರುವ ಹಿನ್ನಲೆಯಲ್ಲಿ ನಮಗೆ ಪ್ರಾಣ ಬೆದರಿಕೆ ಇದೆ ಎಂದ ಅವರು ಮನೆ ನೆಲಸಮ ಮಾಡಿದವರ ವಿರುದ್ದ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಭೋವಿ ಸಂಘದ ತಾಲೂಕು ಅಧ್ಯಕ್ಷ ವಿನಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್, ಮುಖಂಡರಾದ ಕೃಷ್ಣಪ್ಪ, ನರಸಿಂಹಮೂರ್ತಿ, ಸುಧಾಕರ್, ರಾಪ್ಪ, ನರೇಂದ್ರ, ಶ್ರೀನಿವಾಸ್ ಮತ್ತಿತರರು ಇದ್ದರು.