Saturday, December 20, 2025
HomeNationalCrime : ಕಾಲು ಮಸಾಜ್‌ ಮಾಡ್ತೀನಿ ಅಂತ ಪತ್ನಿಯನ್ನ ಮಲಗಿಸಿ ಹಾವಿನಿಂದ ಕಚ್ಚಿಸಿದ್ರು! 3 ವರ್ಷಗಳ...

Crime : ಕಾಲು ಮಸಾಜ್‌ ಮಾಡ್ತೀನಿ ಅಂತ ಪತ್ನಿಯನ್ನ ಮಲಗಿಸಿ ಹಾವಿನಿಂದ ಕಚ್ಚಿಸಿದ್ರು! 3 ವರ್ಷಗಳ ಬಳಿಕ ಹೊರಬಿತ್ತು ಕಾಂಗ್ರೆಸ್‌ ನಾಯಕಿಯ ಮರ್ಡರ್‌ ರಹಸ್ಯ..!

ಅದು ಮುಂಬೈ ಮಹಾನಗರದ ಸಮೀಪವಿರುವ ಬದ್ಲಾಪುರ. ಮೂರು ವರ್ಷಗಳ ಹಿಂದೆ ಅಲ್ಲಿನ ಪ್ರಭಾವಿ ಮಹಿಳಾ ನಾಯಕಿಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ್ದಾರೆ ಎಂದು ಎಲ್ಲರೂ ನಂಬಿದ್ದರು. ಆದರೆ, ಅದು ಆಕಸ್ಮಿಕ ಸಾವಲ್ಲ, ಅದೊಂದು ಪಕ್ಕಾ ಪ್ಲಾನ್ ಮಾಡಿ ಮುಗಿಸಿದ ಕೊಲೆ ಎಂಬ ಸ್ಫೋಟಕ ಸತ್ಯ ಈಗ ಹೊರಬಿದ್ದಿದೆ. ಈ ಕೊಲೆಗೆ ಸ್ಕೆಚ್ ಹಾಕಿದ್ದು ಬೇರೆ ಯಾರೂ ಅಲ್ಲ, ಸ್ವತಃ ಆಕೆಯ ಪತಿ ಅನ್ನೋದು ಕೇಳಿದ್ರೆ ಎಂಥವರೂ ಬೆಚ್ಚಿಬೀಳ್ತಾರೆ. ಈ ಹೈಪ್ರೊಫೈಲ್ ಮರ್ಡರ್ ಮಿಸ್ಟರಿ ಕೇಸಿನ ಸಂಪೂರ್ಣ ವಿವರ ಇಲ್ಲಿದೆ.

Congress Leader Murdered Using Snake in Badlapur 1

Crime – ಏನಿದು ಪ್ರಕರಣ?

ಬದ್ಲಾಪುರದ ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿ ನೀರ್ಜಾ ಅಂಬೇಕರ್ ಅವರು 2022ರಲ್ಲಿ ಅಕಸ್ಮಾತ್ ಆಗಿ ಮೃತಪಟ್ಟಿದ್ದರು. ವೈದ್ಯರು ಕೂಡ ಇದು ಹಾವು ಕಚ್ಚಿ ಆದ ಸಾವು ಎಂದು ದೃಢಪಡಿಸಿದ್ದರು. ಹೀಗಾಗಿ ಪೊಲೀಸರು ಕೂಡ ಇದೊಂದು ಸಹಜ ಸಾವು (Accidental Death Report – ADR) ಎಂದು ಭಾವಿಸಿ ಕೇಸ್ ಫೈಲ್ ಕ್ಲೋಸ್ ಮಾಡಿದ್ದರು. ಆದರೆ, “ಪಾಪದ ಕೊಡ ತುಂಬಿದಾಗ ಒಡೆಯಲೇಬೇಕು” ಎಂಬಂತೆ, ಬರೋಬ್ಬರಿ ಮೂರು ವರ್ಷಗಳ ನಂತರ ಈ ಕೇಸಿನ ಭಯಾನಕ ಮುಖವಾಡ ಕಳಚಿದೆ.

Crime – ಸತ್ಯ ಹೊರಬಂದಿದ್ದು ಹೇಗೆ?

ಇತ್ತೀಚೆಗೆ ಬದ್ಲಾಪುರದಲ್ಲಿ ನಡೆದ ಬೇರೊಂದು ಕೊಲೆ ಯತ್ನದ ಪ್ರಕರಣದಲ್ಲಿ ಪೊಲೀಸರು ಋಷಿಕೇಶ್ ಚಾಲ್ಕೆ ಎಂಬಾತನನ್ನು ಬಂಧಿಸಿದ್ದರು. ಆತನನ್ನು ತಮ್ಮದೇ ಸ್ಟೈಲ್‌ನಲ್ಲಿ ವಿಚಾರಣೆ ನಡೆಸುವಾಗ, ಹಳೆ ವಿಷಯಗಳನ್ನ ಕೆದಕಿದ್ದಾರೆ. ಆಗ ಆತ ಬಾಯ್ಬಿಟ್ಟ ಸತ್ಯ ಪೊಲೀಸರನ್ನೇ ದಂಗಾಗಿಸಿದೆ. ನೀರ್ಜಾ ಅವರ ಸಾವು ಆಕಸ್ಮಿಕವಲ್ಲ, ಅದೊಂದು ಯೋಜಿತ ಕೊಲೆ ಎಂದು ಆತ ಒಪ್ಪಿಕೊಂಡಿದ್ದಾನೆ.

Crime – ಮಸಾಜ್ ನೆಪದಲ್ಲಿ ಭೀಕರ ಕೊಲೆ!

ನೀರ್ಜಾ ಅವರ ಪತಿ ರೂಪೇಶ್ ಅಂಬೇಕರ್ ಈ ಕೊಲೆಯ ಮಾಸ್ಟರ್ ಮೈಂಡ್. ಆತ ತನ್ನ ಮೂವರು ಸ್ನೇಹಿತರಾದ ಚೇತನ್ ದುಧಾನೆ, ಕುನಾಲ್ ಚೌಧರಿ ಮತ್ತು ಋಷಿಕೇಶ್ ಚಾಲ್ಕೆ ಜೊತೆ ಸೇರಿ ಈ ಪ್ಲಾನ್ ಮಾಡಿದ್ದ. ಘಟನೆ ನಡೆದ ದಿನ ರೂಪೇಶ್, “ತುಂಬಾ ಸುಸ್ತಾಗಿದ್ದೀಯಾ, ಬಾ ಕಾಲು ಮಸಾಜ್ ಮಾಡ್ತೀನಿ” ಎಂದು ಪ್ರೀತಿಯಿಂದ ಪತ್ನಿ ನೀರ್ಜಾಳನ್ನು ಹಾಲ್‌ನಲ್ಲಿ ಮಲಗಿಸಿದ್ದಾನೆ. ಪತಿ ಸೇವೆ ಮಾಡ್ತಿದ್ದಾನಲ್ಲ ಎಂದು ನೀರ್ಜಾ ನಂಬಿ ಮಲಗಿದ್ದಾರೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ರೂಪೇಶ್‌ನ ಸ್ನೇಹಿತರು, ಮೊದಲೇ ಒಂದು ಬ್ಲಾಕ್ ಬ್ಯಾಗ್‌ನಲ್ಲಿ ಹಿಡಿದು ತಂದಿದ್ದ ವಿಷಪೂರಿತ ಹಾವನ್ನು ಹೊರತೆಗೆದಿದ್ದಾರೆ. Read this also : ತಾಳಿ ಕಟ್ಟುವ ವೇಳೆ ಬ್ರೀಝಾ ಕಾರು, 20 ಲಕ್ಷ ಹಣಕ್ಕೆ ಡಿಮ್ಯಾಂಡ್, ಮದುವೆಯೇ ಬೇಡ ಎಂದು ಎದ್ದು ಹೋದ ದಿಟ್ಟ (Bride) ವಧು!

ಚೇತನ್ ಎಂಬಾತ ಹಾವನ್ನು ಋಷಿಕೇಶ್ ಕೈಗೆ ಕೊಟ್ಟಿದ್ದಾನೆ. ನಂತರ ಅವರು ಆ ಹಾವಿನಿಂದ ನೀರ್ಜಾ ಅವರ ಎಡ ಕಾಲಿನ ಮಡಮೆಗೆ ಬಲವಂತವಾಗಿ ಮೂರು ಬಾರಿ ಕಚ್ಚಿಸಿದ್ದಾರೆ! ಆಕೆ ಮೃತಪಟ್ಟ ಬಳಿಕ ಯಾರಿಗೂ ಅನುಮಾನ ಬರದಂತೆ ಅದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಾರೆ. ಅಂದು ಪೋಸ್ಟ್‌ಮಾರ್ಟಂ ಕೂಡ ನಡೆಯದ ಕಾರಣ, ರೂಪೇಶ್ ಆಟ ಸುಲಭವಾಗಿತ್ತು.

Congress Leader Murdered Using Snake in Badlapur 2

Crime – ಪೊಲೀಸರು ಹೇಳೋದೇನು?

ಈ ಬಗ್ಗೆ ಮಾತನಾಡಿರುವ ಅಂಬರನಾಥ್ ಎಸಿಪಿ ಶೈಲೇಶ್ ಕಾಳೆ, “2022ರಲ್ಲಿ ನೀರ್ಜಾ ಅವರ ಸಾವು ಹಾವು ಕಚ್ಚಿ ಸಂಭವಿಸಿದೆ ಎಂದು ನಂಬಲಾಗಿತ್ತು. ಆದರೆ ಇತ್ತೀಚೆಗೆ ಬಂದ ಮಾಹಿತಿಯ ಮೇರೆಗೆ ನಾವು ಮರು ತನಿಖೆ ನಡೆಸಿದೆವು. ಬಿಎನ್‌ಎಸ್ ಸೆಕ್ಷನ್ 109ರ ಅಡಿಯಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಪತಿ ರೂಪೇಶ್ ಮತ್ತು ಆತನ ಸ್ನೇಹಿತರು ಸೇರಿ ಹಾವಿನಿಂದ ಕಚ್ಚಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಸದ್ಯ ಪ್ರಮುಖ ಆರೋಪಿ ರೂಪೇಶ್ ಸೇರಿದಂತೆ ಉಳಿದ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular