Saturday, August 30, 2025
HomeStateAvarekayi : ಸೋಮೇನಹಳ್ಳಿ ಸೊಗಡಿನ ಅವರೆಕಾಯಿಗೆ ಪುಲ್ ಡಿಮ್ಯಾಂಡ್, ಆಂಧ್ರದಿಂದಲೂ ಅವರೆ ಖರೀದಿಸಲು ಬರ್ತಾರೆ…!

Avarekayi : ಸೋಮೇನಹಳ್ಳಿ ಸೊಗಡಿನ ಅವರೆಕಾಯಿಗೆ ಪುಲ್ ಡಿಮ್ಯಾಂಡ್, ಆಂಧ್ರದಿಂದಲೂ ಅವರೆ ಖರೀದಿಸಲು ಬರ್ತಾರೆ…!

Avarekayi : ಅವರೆಕಾಯಿ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರೂರುತ್ತದೆ. ಅಂತಹ ಅವರೆಕಾಯಿಗೆ ಈ ಸೀಸನ್ ನಲ್ಲಿ ತುಂಬಾನೆ ಡಿಮ್ಯಾಂಡ್ ಇರುತ್ತದೆ. ಅದರಲ್ಲೂ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಭಾಗದ ಅವರೆಕಾಯಿಗೆ ಈ ಭಾಗದಲ್ಲಿ ಮಾತ್ರವಲ್ಲದೇ ಆಂಧ್ರದಲ್ಲೂ ಸಹ ತುಂಬಾನೆ ಬೇಡಿಕೆಯಿದೆ. ಅವರೆಕಾಯಿ ಸೊಗಡಿನ ತವರು ಸೋಮೇನಹಳ್ಳಿ ಎಂದು ಕರೆಯಲಾಗುತ್ತದೆ. ತಾಲೂಕಿನ ಸೋಮೇನಹಳ್ಳಿ ಬಸ್ ನಿಲ್ದಾಣದಲ್ಲಿರುವ ಮಾರುಕಟ್ಟೆಯಲ್ಲಿ ಅವರೆಕಾಯಿಯ (Avarekayi) ಭರ್ಜರಿ ವ್ಯಾಪಾರ ನಡೆಯುತ್ತದೆ.

Avarekayi Sales 1

ಇಂದಿನ ಕಾಲದಲ್ಲಿ ಮಾರುಕಟ್ಟೆಯಲ್ಲಿ ಅವರೆಕಾಯಿ ವರ್ಷಪೂರ್ತಿಯಾಗಿ ಸಿಗುತ್ತದೆ. ಆದರೆ ಸೋಮೇನಹಳ್ಳಿಯ ಸೊಗಡಿನ ಅವರೆಕಾಯಿ ಮಾತ್ರ ವರ್ಷದಲ್ಲಿ 4 ತಿಂಗಳು ಮಾತ್ರ ಸಿಗುತ್ತದೆ. ದಪ್ಪ ಅವರೆ, ಮಣಿಲಾ ಅವರೆ, ದಬ್ಬೆ ಅವರೆಕಾಯಿಗಳಿಗಿಂತಲೂ ಇದು ಬಹಳ ರುಚಿಕರ. ಆದ್ದರಿಂದಲೇ ಸೊಗಡಿನ ಅವರೆಗೆ ಹೆಚ್ಚಿನ ಬೇಡಿಕೆಯಿದೆ. ಜನರು ಅವರೆಕಾಯಿ ಸೀಸನ್‌ನಲ್ಲಿ ತರಕಾರಿಗಳು ರುಚಿಸುವುದಿಲ್ಲವೆಂದು ಹೇಳುತ್ತಾರೆ. ಕಳೆದ ವರ್ಷ ಸುಮಾರು 50 ರೂಪಾಯಿಯವರೆಗೂ ಕೆಜಿ ಅವರೆಕಾಯಿ ಮಾರಾಟವಾಗಿತ್ತು. ಈ ಬಾರಿ ಸಮಯಕ್ಕೆ ತಕ್ಕಂತೆ ಬೆಲೆ ಏರುಪೇರಾಗುತ್ತಿದೆ. ರೈತರ ನಿರೀಕ್ಷೆಯಂತೆ ಬೆಲೆ ಬಾರದೇ ಇದ್ದರೂ ಸಹ ರೈತರು ತುಂಬು ಹೃದಯದಿಂದಲೇ ಅವರೆಕಾಯಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಸೊಗಡಿನ ಅವರೆಯನ್ನು ಖರೀದಿಸಲು ವಿಜಯಪುರ, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಕೋಲಾರ ಹಾಗೂ ಆಂಧ್ರಪ್ರದೇಶದ ಕದಿರಿ, ಗೋರಂಟ್ಲ, ಹಿಂದೂಪುರ, ಪೆನುಗೊಂಡ ಮುಂತಾದ ಸ್ಥಳಗಳಿಂದ ವ್ಯಾಪಾರಸ್ಥರು ಬಂದು ಟೆಂಪೋಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅವರೆಕಾಯಿಯನ್ನು ಮಾರಲು ರೈತರು ಯಾವ ಊರಿಗೂ ತೆಗೆದುಕೊಂಡು ಹೋಗುವುದಿಲ್ಲ. ಸೋಮೇನಹಳ್ಳಿಯ ಬಸ್‌ ನಿಲ್ದಾಣವೇ ಮಾರುಕಟ್ಟೆಯಾಗಿದೆ. ಇದನ್ನು ಕೊಂಡು ಬೇರೆಯವರಿಗೆ ಅಲ್ಲಿಯೇ ಮಾರುವವರು ಇಲ್ಲೇ ಇರುವುದರಿಂದ ವ್ಯಾಪಾರವೂ ಸೋಮೇನಹಳ್ಳಿಯಲ್ಲೇ ನಡೆಯುತ್ತದೆ. ಬೆಂಗಳೂರಿನ ಮಾರುಕಟ್ಟೆಯಲ್ಲೂ ಸಹ ಸೋಮೇನಹಳ್ಳಿ ಅವರೆಕಾಯಿ ಅಂದ್ರೇ ತುಂಬಾನೆ ಬೇಡಿಕೆಯಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿರುತ್ತದೆ.

Avarekayi Sales 0

ಇನ್ನೂ ಸೋಮೇನಹಳ್ಳಿ ಮಾರುಕಟ್ಟೆಯಲ್ಲಿ ಅವರೆಕಾಯಿ ಮಾರಾಟ ಮಾಡುವಾಗ ಜನಸಂದಣಿ ಸಹ ಹೆಚ್ಚಾಗುತ್ತದೆ. ಈ ಕಾರಣದಿಂದ ಸೋಮೇನಹಳ್ಳಿ ಗ್ರಾ.ಪಂ. ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಹಾಗೂ ಪೊಲೀಸರು ಸ್ಥಳದಲ್ಲಿದ್ದು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಒಟ್ಟಿನಲ್ಲಿ ಪ್ರತೀ ವರ್ಷ ವರ್ಷದ ಕೊನೆಯಲ್ಲಿ ಅವರೆ ಕಾಯಿಯ ಸೊಗಡು ಸೋಮೇನಹಳ್ಳಿ ಸುತ್ತಮುತ್ತಲೂ ಜೋರಾಗಿಯೇ ಇರುತ್ತದೆ ಎಂದು ಹೇಳಲಾಗುತ್ತದೆ.

ಪ್ರತೀ ವರ್ಷ ನಮ್ಮ ಸೋಮೇನಹಳ್ಳಿ ಗ್ರಾಮದಲ್ಲಿ ಅವರೆಕಾಯಿಯ ಮಾರಾಟ ಜೋರಾಗುತ್ತಿರುತ್ತದೆ. ಈ ಬಾರಿಯೂ ಟನ್ ಗಳ ಗಟ್ಟಲೇ ಅವರೆಕಾಯಿ ಮಾರಾಟವಾಗಿದೆ. ಸೋಮೇನಹಳ್ಳಿ ಗ್ರಾಮ ಪಂಚಾಯತಿಯಿಂದಲೂ ಅಗತ್ಯ ಸೌಲಭ್ಯಗಳನ್ನು ನೀಡುತ್ತಿದೆ. ಜೊತೆಗೆ ಸರ್ಕಾರವೂ ಈ ಭಾಗದಲ್ಲಿ ಅವರೆಕಾಯಿ ಮಾರಾಟಕ್ಕಾಗಿಯೇ ಮಾರುಕಟ್ಟೆಯೊಂದನ್ನು ತೆರೆದರೇ ತುಂಬಾ ಅನುಕೂಲವಾಗುತ್ತದೆ. ಇದರಿಂದ ರೈತರಿಗೂ ಅನುಕೂಲವಾಗುತ್ತದೆ. – ಅಶ್ವತ್ಥಪ್ಪ, ಸೋಮೇನಹಳ್ಳಿ ಗ್ರಾಮದ ಮುಖಂಡ

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular