Bangladesh – ನೆರೆ ರಾಷ್ಟ್ರ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ನಿಲ್ಲುತ್ತಿಲ್ಲ ಎಂದೇ ಹೇಳಬಹುದು. ಅನೇಕರು ಭಾರತ ಸರ್ಕಾರ ಹಾಗೂ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಿಸಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಇಸ್ಕಾನ್ (ISKCON) ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Das Brahmachari) ಅವರನ್ನು ಬಂಧಿಸಲಾಗಿತ್ತು. ಇದೀಗ ಮತ್ತೋರ್ವ ಅರ್ಚಕರನ್ನು ಬಾಂಗ್ಲಾ ಪೊಲೀಸರು ಬಂಧನ ಮಾಡಿದ್ದಾರೆ.
ಇಸ್ಕಾನ್ ಸಂಸ್ಥೆಯ ಧಾರ್ಮಿಕ ನಾಯಕ ಚಿನ್ಮಯ್ ಕೃಷ್ಣದಾಸ್ ಬಂಧನದ ಬಳಿಕ ಬಾಂಗ್ಲಾದ ಚಟ್ಟೋಗ್ರಾಮ್ ನಲ್ಲಿ ಮತ್ತೋರ್ವ ಹಿಂದೂ ಅರ್ಚಕನನ್ನು ಬಂಧಿಸಲಾಗಿದೆ. ಶ್ಯಾಮ್ ದಾಸ್ ಪ್ರಭು ಎಂಬ ಅರ್ಚಕ ಜೈಲಿನಲ್ಲಿದ್ದ ಚಿನ್ಮಯ್ ಕೃಷ್ಣದಾಸ್ ರವರನ್ನು ಭೇಟಿಯಾಗಲು ಹೋದಾಗ ಬಂಧಿಸಲಾಗಿದೆ ಎಂದು ಹೇಳಲಾಗಿದೆ. ಯಾವುದೇ ಅಧಿಕೃತ ವಾರೆಂಟ್ ಇಲ್ಲದೇ ಶ್ಯಾಮ್ ದಾಸ್ ಪ್ರಭುರವರನ್ನು ಬಂಧಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಕೋಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ಹಾಗೂ ವಕ್ತಾರರಾದ ರಾಧರಮ್ ದಾಸ್ ರವರು ಶ್ಯಾಮ್ ದಾಸ್ ಪ್ರಭು ರವರ ಬಂಧನದ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬ ಬ್ರಹ್ಮಚಾರಿ ಶ್ರೀ ಶ್ಯಾಮ್ ದಾಸ್ ಪ್ರಭುರವರನ್ನು ಚಟ್ಟೋಗ್ರಾಮ್ ಪೊಲೀಸರು ಬಂಧಿಸಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಬಾಂಗ್ಲಾದೇಶದ ಇಸ್ಕಾನ್ ಮಾಜಿ ಸದಸ್ಯ ಅರ್ಚಕ ಚಿನ್ಮಯ್ ಕೃಷ್ಣದಾಸ್ ರವರನ್ನು ಕಳೆದೆರಡು ದಿನಗಳ ಹಿಂದೆಯಷ್ಟೆ ದೇಶದ್ರೋಹ ಪ್ರಕರಣದಡಿ ಬಂಧನ ಮಾಡಲಾಗಿತ್ತು. ಬಳಿಕ ಅವರಿಗೆ ಜಾಮೀನು ಸಹ ನಿರಾಕರಿಸಲಾಗಿತ್ತು. ಇದರ ಬೆನ್ನಲ್ಲೇ ಮತ್ತೋರ್ವ ಅರ್ಚಕ ಶ್ಯಾಮ್ ದಾಸ್ ಪ್ರಭು ರವರನ್ನು ಬಂಧಿಸಿರುವುದು ಹಿಂದೂಗಳ ಆಕ್ರೋಷಕ್ಕೆ ಕಾರಣವಾಗಿದೆ.
https://x.com/RadharamnDas/status/1862532767788999062
ಇನ್ನೂ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ಆರ್.ಎಸ್.ಎಸ್ ಸಹ ಖಂಡಿಸಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳು ಹಾಗೂ ಇತರೆ ಅಲ್ಪಸಂಖ್ಯಾತರ ವಿರುದ್ದ ಹೆಚ್ಚುತ್ತಿರುವ ಹಿಂಸಾಚಾರದ ವಿರುದ್ದ ತುರ್ತು ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಸ್ವಯ ಸೇವಕ ಸಂಘ ಭಾರತ ಸರ್ಕಾರವನ್ನು ಒತ್ತಾಯಿಸಿದೆ. ಬಾಂಗ್ಲಾದ ಹಿಂದೂಗಳು, ಮಹಿಳೆಯರು ಹಾಗೂ ಇತರೆ ಎಲ್ಲಾ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ ಮೂಲಭೂತವಾದಿಗಳ ದಾಳಿಗಳು, ಕೊಲೆಗಳು, ಲೂಟಿಗಳು, ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿದೆ. ಇದನ್ನು ಆರ್.ಎಸ್.ಎಸ್ ಖಂಡಿಸುತ್ತದೆ ಎಂದು RSS ತನ್ನ ಹೇಳಿಕೆಯಲ್ಲಿ ತಿಳಿಸಿದೆ.