Annual Day – ಎಲ್ಲಾ ಪೋಷಕರೂ ತಮಗೆ ಎಷ್ಟೇ ಕಷ್ಟವಿದ್ದರೂ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದನ್ನೂ ಬಿಡಬಾರದು. ಮಕ್ಕಳಿಗೆ ಒಳ್ಳೆಯ, ಗುಣಮಟ್ಟದ ಶಿಕ್ಷಣ ಕೊಡಿಸಿದಾಗ ಮಾತ್ರ ಪೋಷಕರ ಜೀವನ ಸಾರ್ಥಕವಾದಂತೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಹೊರವಲಯದ ನ್ಯೂ ಪಬ್ಲಿಕ್ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲಾ ಪೋಷಕರೂ ತಮ್ಮ ಮಕ್ಕಳಿಗೆ ಆಸ್ತಿ ಮಾಡುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲು ಮುಂದಿರುತ್ತಾರೆ. ಮಕ್ಕಳಿಗೆ ಆಸ್ತಿ ಮಾಡಬೇಕೆಂಬ ಹಂಬಲದಿಂದ ಇರುತ್ತಾರೆ. ಆದರೆ ತಮ್ಮ ಮಕ್ಕಳಿಗೆ ಬೇಕಾಗಿರುವುದು ಗುಣಮಟ್ಟದ ಶಿಕ್ಷಣವೇ ವಿನಃ ಬೇರೆಯಲ್ಲ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಹಾಗೂ ಗುಣಮಟ್ಟದ ಶಿಕ್ಷಣ ಕೊಡಿಸಲು ಪೋಷಕರು ಮುಂದಾಗಬೇಕು. ಜೊತೆಗೆ ನನ್ನ ಮೊದಲ ಆದ್ಯತೆ ಶಿಕ್ಷಣ ಕ್ಷೇತ್ರಕ್ಕೆ, ಪೋಷಕರು ಶಿಕ್ಷಣಕ್ಕೆ ಸಂಬಂಧಿಸಿದ ಏನೆ ಸಮಸ್ಯೆಗಳಿದ್ದರೂ ನನ್ನನ್ನು ಸಂಪರ್ಕ ಮಾಡಿ. ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ. ಇನ್ನೂ ನ್ಯೂ ಪಬ್ಲಿಕ್ ಶಾಲೆ ವಿದ್ಯಾಗಿರಿ ಬೆಟ್ಟದ ತಪ್ಪಲಿನಲ್ಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆ ಮತ್ತಷ್ಟು ಅಭಿವೃದ್ದಿಯಾಗಲಿ ಎಂದು ಶುಭ ಹಾರೈಸಿದರು.

ಬಳಿಕ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಶಾಲಾ ವಾರ್ಷಿಕೋತ್ಸವಗಳು ಮಕ್ಕಳಲ್ಲಿನ ಪ್ರತಿಭೆ ಹೊರತರಲು ಸಹಕರಿಸುವಂತಹ ಕಾರ್ಯಕ್ರಮಗಳಾಗಿವೆ. ಪುಟ್ಟ ಮಕ್ಕಳಿಂದ ಹಿರಿಯ ಮಕ್ಕಳೂ ಸಹ ಈ ರೀತಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಮುಂದಾಗಬಹುದಾಗಿದೆ. ಇನ್ನೂ ಮಕ್ಕಳೂ ಸಹ ವಿದ್ಯಾಭ್ಯಾಸದ ಜೊತೆ ಜೊತೆಗೆ ಈ ರೀತಿಯ ಪಠ್ಯೇತರ ಚುಟವಟಿಕೆಗಳಲ್ಲೂ ಸಹ ಭಾಗಿಯಾಗುವುದರ ಮೂಲಕ ಮತ್ತಷ್ಟು ಅಭಿವೃದ್ದಿಯಾಗಬಹುದು. ಆದ್ದರಿಂದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕು ಎಂದರು.

ಇನ್ನೂ ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷೆ ಮಂಜುಳಾ ಮಾತನಾಡಿದರು. ಈ ವೇಳೆ ಶಾಲೆಯ ವಿದ್ಯಾರ್ಥಿಗಳು ವಿವಿಧ ರೀತಿಯ ಗೀತೆಗಳಿಗೆ ನೃತ್ಯ ರೂಪಕಗಳನ್ನು, ಸಾಮಾಜಿಕ ಕಳಕಳಿಯ ನಾಟಕ ಹಾಗೂ ಮೊಬೈಲ್ ಹಾಗೂ ಸೋಷಿಯಲ್ ಮಿಡಿಯಾ ಬಳಕೆಯ ಬಗ್ಗೆ ಆಗುವಂತಹ ನಾಟಕಗಳನ್ನು ಪ್ರದರ್ಶನ ಮಾಡಿ ಸಭಿಕರ ಗಮನ ಸೆಳೆದರು. ಈ ವೇಳೆ ತಹಸೀಲ್ದಾರ್ ಸಿಗ್ಬತ್ತುಲ್ಲಾ, ಬಿಇಒ ಕೃಷ್ಣಪ್ಪ, ಆರಕ್ಷಕ ಉಪನಿರೀಕ್ಷಕ ಗಣೇಶ್, ಪ.ಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಮುನಿಕೃಷ್ಣಪ್ಪ, ಕೃಷ್ಣಪ್ಪ, ಹಂಪಸಂದ್ರ ಸರ್ಕಾರಿ ಆಸ್ಪತ್ರೆಯ ಡಾ.ಅಕ್ಷಯ್, ಜಿಪಿಟಿ ಶಿಕ್ಷಕರ ಸಂಘಧ ಅಧ್ಯಕ್ಷ ಪಿ.ಎನ್.ರಾಜಶೇಖರ್, ಶಾಲೆಯ ಮುಖ್ಯಶಿಕ್ಷಕ ಖಲೀಲ್ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.