ಆಂಧ್ರಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಸಭಾ ಚುನಾವಣೆ ಏಕಕಾಲಕ್ಕೆ ನಡೆಯಲಿದ್ದು, ಕೆಲವೇ ದಿನಗಳಲ್ಲಿ ಚುನಾವಣೆಯ ನಿಮಿತ್ತ ಮತದಾನ ನಡೆಯಲಿದೆ. ಈ ನಡುವೆ ಎನ್.ಡಿ.ಎ ಜೊತೆ ಮೈತ್ರಿ ಮಾಡಿಕೊಂಡಿರುವ ಟಿಡಿಪಿ ಹಾಗೂ ಜನಸೇನಾ ಪಕ್ಷಗಳು ಜಂಟಿಯಾಗಿ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಟಿಡಿಪಿ ಪಕ್ಷದ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ರವರು ಮೈತ್ರಿ ಮಾಡಿಕೊಂಡಿದ್ದು, ಇದೀಗ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಅನೇಕ ಉಚಿತ ಘೋಷಣೆಗಳನ್ನು ಘೋಷಣೆ ಮಾಡಲಾಗಿದೆ.
ಚುನಾವಣೆ ಘೋಷಣೆಗೂ ಮುನ್ನವೇ ಆಂಧ್ರದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಜನಸೇನಾ ಪಕ್ಷದ ಪವನ್ ಕಲ್ಯಾಣ್ ರವರು ಮೈತ್ರಿ ಮಾಡಿಕೊಂಡಿದ್ದರು. ಬಳಿಕ ಈ ಮೈತ್ರಿ ಎನ್.ಡಿ.ಎ ಕೂಟ ಸೇರಿಕೊಂಡಿತ್ತು. ಚುನಾವಣೆ ಘೋಷಣೆಯಾದ ಬಳಿಕ ದೊಡ್ಡ ಮಟ್ಟದಲ್ಲೇ ಪ್ರಚಾರ ಸಹ ನಡೆಸುತ್ತಿದ್ದಾರೆ. ಇದೀಗ ಕರ್ನಾಟಕ ಮಾದರಿಯಲ್ಲೇ ಭರ್ಜರಿ ಉಚಿತ ಕೊಡುಗೆಗಳನ್ನು ಪ್ರಕಟಿಸಲಾಗಿದೆ. ಎಲ್ಲಾ ವಯೋಮಾನದವರಿಗೂ ಈ ಪ್ರಣಾಳಿಕೆಯಲ್ಲಿ ಒಂದಲ್ಲ ಒಂದು ರೀತಿಯ ಆರ್ಥಿಕ ಸಹಾಯವನ್ನು ಪ್ರಕಟಿಸಲಾಗಿದೆ. ಕೆಲವು ಪ್ರಣಾಳಿಕೆಗಳು ಬಂಪರ್ ಆಫರ ಎಂದೇ ಹೇಳಲಾಗುತ್ತಿದೆ.
ಈ ಪೈಕಿ ಪ್ರಮುಖವಾದವು ತಲ್ಲಿಕಿ ವಂದನಮ್ ಎಂಭ ಯೋಜನೆಯಡಿ ದಾಖಲಾದ ಶಾಲಾ ಮಕ್ಕಳಿಗೆ ವಾರ್ಷಿಕ 15 ಸಾವಿರ, ಉದ್ಯೋಗ ಸಿಗುವವರೆಗೂ ನಿರುದ್ಯೋಗಿ ಭತ್ಯೆ 3 ಸಾವಿರ, ರೈತರಿಗೆ ವಾರ್ಷಿಕ 20 ಸಾವಿರ, 18 ವರ್ಷ ಮೇಲ್ಪಟ್ಟ ಎಲ್ಲಾ ಮಹಿಳೆಯರಿಗೆ ಮಾಸಿಕ 1500, ಮಿನುಗಾರರಿಗೆ ವಿರಾಮದ ಅವಧಿಯಲ್ಲಿ 20 ಸಾವಿರ ಆರ್ಥಿಕ ನೆರವು ನೀಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ಅದರ ಜೊತೆಗೆ ಎಲ್ಲಾ ಮಹಿಳೆಯರಿಗೂ ಬಸ್ ಗಳಲ್ಲಿ ಉಚಿತ ಪ್ರಯಾಣ, ಪ್ರತಿ ಮನೆಗೆ ವಾರ್ಷಿಕ 3 ಅಡುಗೆ ಸಿಲಂಡರ್ ಉಚಿತ, ನೀರು ಸಂಪರ್ಕ ಉಚಿತ, ಎಲ್ಲಾ ಮನೆಗಳಿಗೂ ಕುಡಿಯುವ ನೀರು ಹಾಗೂ ಬಡ ಕುಟುಂಬಗಳಿಗೆ 900 ಚದರ ಅಡಿ ಉಚಿತ ಭೂಮಿ ನೀಡಲಾಗುತ್ತದೆ. ಜೊತೆಗೆ ಉಚಿತವಾಗಿ ಮರಳು ಸಹ ನೀಡುವುದಾಗಿ, ಉಳುವವರು ಹಾಗೂ ವಾಸಿಸುವವನೇ ಭೂಮಿಯ ಒಡೆಯ ಕಾಯ್ದೆಯನ್ನು ವಾಪಸ್ಸು ಪಡೆಯುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ.
ಇದೆಲ್ಲದರ ಜೊತೆಗೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬರೊಬ್ಬರಿ 20 ಲಕ್ಷ ಉದ್ಯೋಗಾವಕಾಶ ಸೃಷ್ಟಿಸುವುದಾಗಿಯೂ, ಸಣ್ಣ ವ್ಯಾಪಾರಸ್ಥರಿಗೆ ಬಡ್ಡಿ ರಹಿತ ಸಾಲ, ಹಿಂದುಳಿದ ಜಾತಿಗಳ ರಕ್ಷಣೆಗೆ ವಿಶೇಷ ಕಾಯ್ದೆ ಜಾರಿಗೆ ತರುವುದಾಗಿ ಘೋಷಣೆ ಮಾಡಲಾಗಿದೆ. ಇನ್ನೂ ಈ ಪ್ರಣಾಳಿಕೆಗಳು ಮೈತ್ರಿ ಪಕ್ಷ ಗೆಲ್ಲಲು ಸಹಕಾರಿಯಾಗುತ್ತಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.