ಗುಡಿಬಂಡೆ: ಭವ್ಯ ಪರಂಪರೆಯುಳ್ಳ ಭಾರತದಲ್ಲಿ ಹಲವಾರು ಭಾಷೆಗಳಿವೆ, ಎಲ್ಲಾ ಭಾಷೆಗಳಿಗೂ ತನ್ನದೇ ಆದ ಇತಿಹಾಸ, ಪ್ರಾಮುಖ್ಯತೆಯಿದೆ. ಭಾರತೀಯರಾದ ನಾವು ಎಲ್ಲಾ ಭಾಷೆಗಳನ್ನು ಗೌರವಿಸಬೇಕೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ತಾಲೂಕು ಕಾರ್ಯದರ್ಶಿ ಡಿ.ಎಲ್.ಪರಿಮಳ ಅಭಿಪ್ರಾಯಪಟ್ಟರು.
ಪಟ್ಟಣದ ನ್ಯೂ ವಿಷನ್ ಇಂಗ್ಲಿಷ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ತಾಲೂಕು ಘಟಕ ಉದ್ಘಾಟನೆ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಅನೇಕ ಭಾಷೆಗಳಿದ್ದು, ಸಾಹಿತ್ಯದ ಶಕ್ತಿಯಿಂದ ಸಂಘಟಿತವಾಗಿದೆ. ಭಾರತಾಂಬೆಯ ಕೊರಳಿಗೆ ಭಾಷೆಗಳು ಪುಷ್ಪಗಳ ಮಾಲೆಯಂತೆ ಕಂಗೊಳಿಸಿದೆ. ಇದು ದೇಶದ ಹಿರಿಮೆಗೆ ಏಕತೆಗೆ ಕಾರಣವಾಗಿದೆ. ದೇಶದ ಅಭಿವೃದ್ದಿಯಲ್ಲಿ ಭಾಷೆ ಸಹ ತುಂಬಾನೆ ಪ್ರಾಮುಖ್ಯತೆ ವಹಿಸುತ್ತದೆ. ಆದ್ದರಿಂದ ಯುವಕರು ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಇನ್ನೂ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟಾಕ್ಷಣ ನಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಅದನ್ನು ಒಂದು ಹಂತದವರೆಗೆ ಹಾರೈಕೆ ಮಾಡಿ ಜನ, ಜಾನುವಾರುಗಳಿಗೆ ಬಲಿಯಾಗದಂತೆ ಕಾಪಾಡ ಬೇಕಿದೆ. ಇಂದು ಹಾಕಿರುವ ಗಿಡಗಳನ್ನು ವಿದ್ಯಾರ್ಥಿಗಳು ನಿಗಾ ವಹಿಸುವ ಮೂಲಕ ನಿಮ್ಮ ಕಿರಿಯ ಸಹೋದರರಿಗೆ ಉಡುಗೊರೆಯಾಗಿ ನೀಡ ಬೇಕೆಂದು ಸಲಹೆ ನೀಡಿದರು.
ಇದೇ ಸಮಯದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ ಮಾತನಾಡಿ, ಪರಿಸರ ಮನುಕುಲದ ಸಂಪತ್ತು. ಆದ್ದರಿಂದ ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿ ಗಿಡ, ಮರಗಳ ಸಂರಕ್ಷಣೆ ಮಾಡುವುದು ನಮ್ಮೆಲ್ಲಾರ ಹೊಣೆಯಾಗಬೇಕು ಎಂದು ಹೇಳಿದರು. ಗಿಡ, ಮರಗಳು ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ನಮಗೆ ಆಮ್ಲಜನಕ ನೀಡುತ್ತವೆ. ಮರಗಳಲ್ಲಿ ಪರಿಸರ ಸಮತೋಲನಕ್ಕೆ ಸಹಕಾರಿಯಾಗುವ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಕಾಲಕಾಲಕ್ಕೆ ಮಳೆಯಾಗಿ ಬೆಳೆ ಬೆಳೆಯಲು ಮರಗಳು ಅವಶ್ಯ. ಆದ್ದರಿಂದ ಅರಣ್ಯ ಮತ್ತು ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ತಾಲೂಕು ಘಟಕದ ಅಧ್ಯಕ್ಷರಾಗಿ ವೆಂಕಟಾಚಲಯ್ಯ, ಕಾರ್ಯದರ್ಶಿಯಾಗಿ ಡಿ.ಎಲ್.ಪರಿಮಳ, ಸದಸ್ಯರಾಗಿ ಸಾಧು ಪುರುಷೋತ್ತಮ್, ಪದ್ಮಾಕ್ಷಿ, ಮಹಾಲಕ್ಷ್ಮೀ, ನರೇಂದ್ರ ಬಾಬು, ರಾಜಶೇಖರ್ ರವರುಗಳು ಆಯ್ಕೆಯಾದರು. ಈ ವೇಳೆ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಜಿಲ್ಲಾ ಘಟಕದ ಅಧ್ಯಕ್ಷ ಆದಿನಾರಾಯಣಪ್ಪ, ಶಿಕ್ಷಕ ರಾಜಪ್ಪ, ನರಸಿಂಹರೆಡ್ಡಿ, ನ್ಯೂ ವಿಷನ್ ಶಾಲೆಯ ಸುಮಾ, ತಹಸೀನ ಭಾನು, ತುಳಸಿ ಸೇರಿದಂತೆ ಹಲವರು ಇದ್ದರು.