ಬಾಗೇಪಲ್ಲಿ: ದಲಿತರನ್ನು ಆರ್ಥಿಕವಾಗಿ ದಿವಾಳಿ ಮಾಡುವಂತಹ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ಕ್ರಮಗಳನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ಕಾರ್ಯಕರ್ತರು ಸೋಮವಾರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪಟ್ಟಣದ ಸುಂದರ್ಯ ಭವನದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಬಂದ ದಲಿತ ಹಕ್ಕುಗಳ ಸಮಿತಿಯ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ರಾಜ್ಯ ಸಂಚಾಲಕ ಬಿಳ್ಳೂರು ನಾಗರಾಜ್ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ ದೇಶದಲ್ಲಿ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದ್ದರೂ ಸಹ ನಮ್ಮನ್ನಾಳುವ ಯಾವುದೇ ಸರ್ಕಾರ ಈ ದೌರ್ಜನ್ಯಗಳಿಗೆ ಕಡಿವಾಣಹಾಕುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಅಲ್ಲದೆ ದಲಿತರನ್ನು ಆರ್ಥಿಕವಾಗಿ ದಿವಾಳಿ ಮಾಡುವಂತಹ ಕಾನೂನುಗಳನ್ನು ಜಾರಿಗೆ ತರುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ದಲಿತರನ್ನು ಉದ್ದಾರ ಮಾಡುವುದಾಗಿ ಬಜೆಟ್‍ನಲ್ಲಿ ಕೋಟ್ಯಾಂತರ ರೂ.ಗಳ ಅನುದಾನ ಘೋಷಣೆಯಾಗುತ್ತೆ ಆದರೆ ಅರ್ಹ ದಲಿತರಿಗೆ ಮಾತ್ರ ಬಜೆಟ್‍ನಲ್ಲಿ ಅನುದಾನ ತಲುಪುತ್ತಿಲ್ಲ ಇದು ಕೇವಲ ಬಜೆಟ್‍ಗೆ ಮಾತ್ರ ಸೀಮಿತವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಎಸ್.ಸಿ ಮತ್ತು ಎಸ್.ಟಿ ನಿಗಮದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೀಡಬೇಕು, ಈ ಇಲಾಖೆಗಳನ್ನು ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಬೇಕು, ಎಸ್.ಸಿ ಎಸ್.ಟಿ ಭೂಒಡೆತನ ಯೋಜನೆಯಡಿಯಲ್ಲಿ ದಲಿತರಿಗೆ ಭೂಮಿ ಮಂಜೂರು ಮಾಡಬೇಕು, ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ದಲಿತರಿಗೆ ಕೊಳವೆ ಬಾವಿ ಮಂಜೂರು ಮಾಡಬೇಕು, ನರೇಗಾ ಯೋಜನೆಯಲ್ಲಿ 200 ದಿನಗಳ ಕೆಲಸ ನೀಡಬೇಕು ಮತ್ತು 600 ರೂ.ಗಳ ಕೂಲಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ನಂತರ ಪತ್ರಿಭಟನಕಾರರು ತಹಸೀಲ್ದಾರ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಕಾರ್ಯದರ್ಶಿ ಜಿ.ಕೃಷ್ಣಪ್ಪ, ಜಿಲ್ಲಾ ಸಂಚಾಲಕ ಕೆ.ಮುನಿಯಪ್ಪ, ತಾಲೂಕು ಕಾರ್ಯದರ್ಶಿ ಆಗಟಮಡಕ ಕೃಷ್ಣಪ್ಪ,ಸಿಐಟಿಯು ಮುಖಂಡರಾದ ಮುಸ್ತಾಫ್, ಚೆನ್ನರಾಯಪ್ಪ, ಚಲಪತಿ, ನಾಗರಾಜ್, ಮಂಜುನಾಥ್ ಮತ್ತಿತರರು ಇದ್ದರು.