Local News – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹೊಸದಾಗಿ ಮಂಜೂರಾಗಿರುವ ಹೊಸ ಆಂಬ್ಯುಲೆನ್ಸ್ ಗೆ ಶಾಸಕ ಸುಬ್ಬಾರೆಡ್ಡಿ ರವರು ಚಾಲನೆ ನೀಡಿದರು. ಬಳಿಕ ತಾಲೂಕಿನ ಕೊಂಡಾವಲಹಳ್ಳಿ ಗ್ರಾಮದಲ್ಲಿ ರಾಜ್ಯಸಭಾ ಸದಸ್ಯರಾದ ಕೆ.ನಾರಾಯಣರವರ ಅನುದಾನದಡಿ ಸಿಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಮಯದಲ್ಲಿ ಮಾತನಾಡಿದ ಶಾಸಕ ಸುಬ್ಬಾರೆಡ್ಡಿ, ಸುಮಾರು ದಿನಗಳಿಂದ ಗುಡಿಬಂಡೆ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ ಸಮಸ್ಯೆಯಿತ್ತು. ಇದೀಗ ಒಟ್ಟು ಮೂರು ಆಂಬ್ಯುಲೆನ್ಸ್ ಗಳು ಕೆಲಸ ನಿರ್ವಹಿಸಲಿದೆ. ನಗುಮಗು, 108, ಸರ್ಕಾರದಿಂದ ಬಂದ ಹೊಸ ಆಂಬ್ಯುಲೆನ್ಸ್ ಈ ಮೂರು ಆಂಬ್ಯುಲೆನ್ಸ್ ಗಳು ಕೆಲಸ ನಿರ್ವಹಿಸಲಿದ್ದು, ಜನರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಜೊತೆಗೆ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಾಗಿ ಬಡವರೇ ಬರುವುದರಿಂದ ಅವರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಬಡ ರೋಗಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ವೈದ್ಯರ ಸಮಸ್ಯೆ, ತಂತ್ರಜ್ಞರ ಸಮಸ್ಯೆಯ ಬಗ್ಗೆ ಆದಷ್ಟು ಶೀಘ್ರ ಬಗೆಹರಿಸಲಾಗುತ್ತದೆ. ಆರೋಗ್ಯ ಸೇವೆಯನ್ನು ಒದಗಿಸಲು ನಾನು ಸದಾ ಶ್ರಮಿಸುತ್ತೇನೆ ಎಂದರು.
ಈ ವೇಳೆ ಪಪಂ ಅಧ್ಯಕ್ಷ ವಿಕಾಸ್, ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್, ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ, ಆರೋಗ್ಯ ರಕ್ಷಾ ಸಮಿತಿಯ ಕೆ.ಟಿ.ನಂಜುಂಡಪ್ಪ, ನಿರ್ಮಲಮ್ಮ, ಮುಖಂಡರಾದ ಲಕ್ಷ್ಮೀನಾರಾಯಣ, ಕೃಷ್ಣೇಗೌಡ, ರಮೇಶ್, ಪ್ರಕಾಶ್, ನಯಾಜ್, ನವೀನ್ ರಾಜ್ ಸೇರಿದಂತೆ ಹಲವರು ಇದ್ದರು.