ಗುಡಿಬಂಡೆ: ದೈನಂದಿನ ಜೀವನ ಜಂಜಾಟದಿಂದ ಮಾನಸಿಕವಾಗಿ ಅನೇಕರು ನೆಮ್ಮದಿ ಕಳೆದುಕೊಳ್ಳುತ್ತಿರುತ್ತಾರೆ. ದಿನನಿತ್ಯದ ಆಗುಹೋಗುಗಳ ಜೊತೆಗೆ ಕೊಂಚ ಮನರಂಜನೆ ಸಹ ಇದ್ದರೇ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿರುತ್ತದೆ. ಈ ನಿಟ್ಟಿನಲ್ಲಿ ವಿವಿಧ ರೀತಿಯ ಕಲೆಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದೂರದರ್ಶನ ಕಲಾವಿದೆ ಗಾನವಿ ಸಾಯಿ ಅಭಿಪ್ರಾಯಪಟ್ಟರು.
ತಾಲೂಕಿನ ಎಲ್ಲೋಡು ಆದಿನಾರಾಯಣಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಕನ್ನಡ ಮತ್ತಿ ಸಂಸ್ಕೃತಿ ಇಲಾಖೆ ಹಾಗೂ ಚಿಕ್ಕಬಳ್ಳಾಪುರದ ಶ್ರೀ ಸ್ವಾಮಿ ವಿವೇಕಾನಂದ ಕಲಾ ಬಳಗ ಮತ್ತು ಕಲಾ ಕೇಂದ್ರ ರವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಜನಪದ, ಸಾಂಸ್ಕೃತಿಕ ಶಾಸ್ತ್ರಿಯ ಕಲೆಗಳ ಕಲಾಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಹಿಂದಿನ ಕಾಲದಲ್ಲಿ ಗ್ರಾಮಗಳಲ್ಲಿ ನಡೆಯುವ ಜಾತ್ರೆ, ಉತ್ಸವ, ಹಬ್ಬಗಳ ಸಮಯದಲ್ಲಿ ವಿವಿಧ ರೀತಿಯ ಕಲೆಗಳ, ಕ್ರೀಡೆಗಳ ಸ್ಫರ್ಧೆ, ಪ್ರದರ್ಶನಗಳು ನಡೆಯುತ್ತಿದ್ದವು, ಆಗ ಸುತ್ತಮುತ್ತಲ ಗ್ರಾಮಗಳ ಜನತೆ ಒಂದೆಡೆ ಸೇರಿ ಆ ಕಲೆಗಳನ್ನು ಆಸ್ವಾದಿಸುತ್ತಿದ್ದರು ಆದರೆ ಇಂದಿನ ಯುಗದಲ್ಲಿ ಅದೆಲ್ಲವೂ ಮಾಯವಾಗುತ್ತಿವೆ, ಆರೋಗ್ಯವೂ ಕ್ಷೀಣಿಸುತ್ತಿದೆ, ಹಾಗಾಗಿ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಲು ಯಾವುದೇ ಕಲಾ ಪ್ರಕಾರಗಳಾಗಲಿ ಅವುಗಳಿಗೆ ಪ್ರೋತ್ಸಾಹ ನೀಡಬೇಕಿದೆ, ಒಂದೊಂದು ಕಲಾ ಪ್ರಕಾರಗಳಲ್ಲಿಯೂ ಒಂದೊಂದು ರೀತಿಯ ಮನರಂಜನೆ ಸಿಗುತ್ತದೆ ಎಂದರು.
ಈ ವೇಳೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ನೃತ್ಯ ಕಲಾವಿದೆ ದಿವ್ಯ, ಹಿರಿಯ ಜಾನಪದ ಕಲಾವಿದೆ ರಾಧಮ್ಮ, ಶ್ರೀ ಸ್ವಾಮಿ ವಿವೇಕಾನಂದ ಕಲಾ ಬಳಗ ಕಲಾ ಕೇಂದ್ರದ ಅಧ್ಯಕ್ಷ ಸೋ.ಸು.ನಾಗೇಂದ್ರನಾಥ್, ಜಾನಪದ ಕಲಾವಿದ ಶಿವಕುಮಾರ್ ಸೇರಿದಂತೆ ಅನೇಕರು ಹಾಜರಿದ್ದರು. ನೃತ್ಯ ರೂಪಕ, ಸಮೂಹನೃತ್ಯ, ಕೋಲಾಟ, ವೀರಗಾಸೆ, ಡೊಳ್ಳುಕುಣಿತ, ಸುಗಮಸಂಗೀತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಅನಾವರಣಗೊಂಡವು.