ಮುಡಾ ಸೈಟು ಹಂಚಿಕೆ ಹಗರಣದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದಿನಕ್ಕೊಂದು ರಾಜಕೀಯ ಸಂಚಲನ ಸೃಷ್ಟಿಯಾಗುತ್ತಿದೆ ಎನ್ನಬಹುದಾಗಿದೆ. ಸದ್ಯ ದಲಿತ ಸಿಎಂ ಕೂಗು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ದಲಿತ ಸಮುದಾಯದ ಮುಖಂಡರು ಮಾತುಕತೆ ನಡೆಸಿರುವುದು, ನಾಯಕರುಗಳ ಭೇಟಿ ಎಲ್ಲವೂ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಇದೀಗ ಸತೀಶ್ ಜಾರಕಿಹೊಳಿ ಕಾಂಗ್ರೇಸ್ ನಾಯಕರನ್ನು ಭೇಟಿಯಾಗುತ್ತಿರುವುದು ಅವರೇ ಮುಂದಿನ ಸಿಎಂ ಆಗಬಹುದಾ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ. ಇದೀಗ ಅವರು ನೀಡಿದ ಹೇಳಿಕೆಯೊಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
ಮೈಸೂರಿನಲ್ಲಿ ಮಾಧ್ಯಮಗಳ ಸಿಎಂ ಬದಲಾವಣೆ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮೈಸೂರಿಗೆ ದಸರಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಂದಿದ್ದೇನೆ. ರಾತ್ರಿಯವರೆಗೆ ಇದ್ದು, ಉಸ್ತುವಾರಿ ಸಚಿವ ಮಹದೇವಪ್ಪ ಅವರ ಜತೆ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಸಿದ್ದರಾಮಯ್ಯ ಅವರೇ ಸದ್ಯ ಮುಖ್ಯಮಂತ್ರಿ, ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ. ನಾವು ಅವರ ಜತೆ ಸಚಿವರಾಗಿ ಕೆಲಸ ಮಾಡುತ್ತೇವೆ. ಸದ್ಯ ಸಿಎಂ ಬದಲಾವಣೆ ಪ್ರಶ್ನೆ ಉದ್ಭವಿಸುವುದಿಲ್ಲ. ಆ ರೀತಿಯ ಚರ್ಚೆಗಳು ನಡೆದಿಲ್ಲ. ಇದು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆಯಷ್ಟೇ. ಈ ಪಕ್ಷದವರು ಪ್ರೀತಿಯಿಂದ ನಮ್ಮ ಹೆಸರನ್ನು ಹೇಳುತ್ತಿದ್ದಾರೆ. ಆ ರೀತಿಯ ಬೆಳವಣಿಗೆ ನಡೆದಿಲ್ಲ ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಸತೀಶ್ ಜಾರಕಿಹೊಳಿಯವರ ಈ ಹೇಳಿಕೆ ಮತಷ್ಟು ಚರ್ಚೆಗಳಿಗೆ ಕಾರಣವಾಗಿದೆ.
ನಮ್ಮ ಬೆಂಬಲಿಗರು ಮುಂದಿನ ಸಿಎಂ ಎಂದು ಕಾರ್ಯಕ್ರಮದಲ್ಲಿ ಜೈಕಾರ ಹಾಕಿರುವುದು ಸಾಮಾನ್ಯ. ಅದನ್ನೇ ಇಟ್ಟುಕೊಂಡು ಏನೋ ಬದಲಾವಣೆಯಾಗುತ್ತದೆ ಎಂದು ಹೇಳುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ ವಿಚಾರದಲ್ಲಿ ನಾನೇನು ಹೇಳುವುದಕ್ಕೆ ಸಾಧ್ಯವಿಲ್ಲ. ರಾಜಕಾರಣಿಗಳು ಸೇರಿದಾಗ ರಾಜಕಾರಣ ಮಾಡುತ್ತಾರೆ. ಉದ್ಯಮಿಗಳು ಸೇರಿದಾಗ ಉದ್ಯಮ ವಿಚಾರವನ್ನ ಚರ್ಚೆ ಮಾಡುವುದು ಸಾಮಾನ್ಯ ಎಂದು ಹೇಳಿದ್ದಾರೆ.
ಇನ್ನೂ ನಾನು ಸಿಎಂ ರೇಸ್ನಲ್ಲಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯೇ ಇಲ್ಲ ಎಂದ ಮೇಲೆ ಸಿಎಂ ರೇಸ್ನಲ್ಲಿ ಇರಲು ಹೇಗೆ ಸಾಧ್ಯ?. ಸಿದ್ದರಾಮಯ್ಯ ಜೊತೆಗಿದ್ದೇವೆ ಎಂದು ಎಐಸಿಸಿ ಹೇಳಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ. ಅದರ ಅಗತ್ಯತೆಯೂ ಈಗಿಲ್ಲ. ಇಬ್ಬರು ಕಾಫಿ ಪೇ ಚರ್ಚಾ ಮಾಡಿದ ಮಾತ್ರಕ್ಕೆ ಸಿಎಂ ಬದಲಾಗಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇತ್ತ, ಸಿದ್ದರಾಮಯ್ಯ ಪರವಾಗಿ ಸಚಿವ ಕೃಷ್ಣಬೈರೇಗೌಡ, ಜಮೀರ್ ಅಹ್ಮದ್ ಸೇರಿ ಹಲವರು ಬ್ಯಾಟ್ ಬೀಸಿದ್ದಾರೆ. ಪರೋಕ್ಷವಾಗಿ ಜಾರಕಿಹೊಳಿಗೆ ಟಕ್ಕರ್ ಕೊಡುವ ಕೆಲಸ ಮಾಡಿದ್ದಾರೆ. ದಸರಾ ಹಬ್ಬದ ಬಳಿಕ ಸಿಎಂ ಬದಲಾವಣೆ ಪಕ್ಕಾ ಎಂಬ ಮಾತುಗಳೂ ಸಹ ಬಲವಾಗಿ ಕೇಳಿಬರುತ್ತಿದ್ದು, ಮುಂದಿನ ಸಿಎಂ ಸತೀಶ್ ಜಾರಕಿಹೊಳಿಯವರೇ ಆಗಲಿದ್ದಾರೆ ಎಂಬ ಚರ್ಚೆ ಜೋರಾಗಿದೆ.