ಮುಡಾ ಪ್ರಕರಣಕ್ಕೆ (MUDA Scam)ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯನವರಿಗೆ ಕಳೆದೆರಡು ದಿನಗಳಿಂದ ಅಶುಭ ಸುದ್ದಿಗಳೇ ಎದುರಾಗುತ್ತಿವೆ. ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಬಳಿಕ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ದೂರುದಾರ ಸ್ನೇಹಮಯಿ ಕೃಷ್ಣ ನೀಡಿದ ದೂರಿನಂತೆ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಸೇರಿದಂತೆ ಇತರರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ. ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್ ಇದು. “ಪ್ಲೀಸ್ ಅಂಡರ್ ಲೈನ್ ದಿಸ್ ವರ್ಡ್” ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬೇಸರದಿಂದ ನುಡಿದರು.
ಮುಡಾ ಹಗರಣದ ಸಂಬಂಧ ಸಿ.ಆರ್.ಪಿ.ಸಿ ಸೆಕ್ಷನ್ 156(3) ರಡಿ ತನಿಖೆ ನಡೆಸಿ ಮೂರು ತಿಂಗಳೊಳಗೆ ವರದಿ ನೀಡುವಂತೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಆದೇಶ ನೀಡಿದ್ದರು. ಅದರಂತೆ ಇದೀಗ ಎಫ್.ಐ.ಆರ್ ದಾಖಲಾಗಿದೆ. ಎಫ್.ಐ.ಆರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (A1), ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಿಎಂ (A2), ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ ಸ್ವಾಮಿ (A3), ನಕಲಿ ಭೂ ಮಾಲೀಕ, ಮಾರಾಟಗಾರ ದೇವರಾಜು (A4) ಸೇರಿದಂತೆ ಹಲವರ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.
ಕಾಯ್ದೆ, ಐಪಿಸಿ ಸೆಕ್ಷನ್ ಅಡಿ ಎಫ್.ಐ.ಆರ್: ಭ್ರಷ್ಟಾಚಾರ ತಡೆ ಕಾಯ್ದೆ 1988, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲು, ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ, ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು, ಸೆಕ್ಷನ್ 403 ಆಸ್ತಿಯ ದುರ್ಬಳಕೆ, ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ, ಸೆಕ್ಷನ್ 420 ವಂಚನೆ, ಸೆಕ್ಷನ್ 426 ದುಷ್ಕೃತ್ಯವೆಸಗುವುದು, ಸೆಕ್ಷನ್ 465 ಫೋರ್ಜರಿ, ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ, ಸೆಕ್ಷನ್ 340 ಅಕ್ರಮ ಬಂಧನ, ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ.
MUDA Scam: ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್ ಇದು ಎಂದು ಸಿಎಂ ಸಿದ್ದರಾಮಯ್ಯ ಬೇಸರ:
ಇನ್ನೂ ಈ ಕುರಿತು ಮೈಸೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾನು ಯಾಕೆ ರಾಜೀನಾಮೆ ಕೊಡಲಿ? ನಾನು ಏನು ತಪ್ಪು ಮಾಡಿದ್ದೇನೆ ಹೇಳಿ? ನಾನು ಯಾವ ತಪ್ಪು ಮಾಡಿಲ್ಲ. ರಾಜೀನಾಮೆ ಪ್ರಶ್ನೆಗಳೇ ಬರುವುದಿಲ್ಲ. ನನ್ನ ಕಂಡರೇ ವಿಪಕ್ಷಗಳಿಗೆ ಭಯವಿರುವ ಕಾರಣ ನನ್ನನ್ನು ಪದೇ ಪದೇ ಟಾರ್ಗೆಟ್ ಮಾಡುತ್ತಾರೆ. ಇದು ನನ್ನ ಜೀವನದ ರಾಜಕೀಯ ಸಂಬಂಧದ ಮೊದಲ ಕೇಸ್. ಪ್ಲೀಸ್ ಅಂಡರ್ ಲೈನ್ ದಿಸ್ ವರ್ಡ್. ನಮ್ಮ ವಕೀಲರು ಕಾನೂನು ಹೋರಾಟವನ್ನು ಮಾಡುತ್ತಾರೆ ಎಂದು ತಿಳಿಸಿದರು.