ಇಂದಿನ ಮಕ್ಕಳು ಮೊಬೈಲ್ ಗಳಿಂದ ಹಾಳಾಗುತ್ತಿದ್ದಾರೆ. ಮಕ್ಕಳು ಮನೆಯಲ್ಲಿ ಏನೆಲ್ಲಾ ಮಾಡುತ್ತಿದ್ದಾರೆ ಎಂಬುದನ್ನು (Mobile Addiction) ಪೋಷಕರು ಗಮನಿಸುತ್ತಿರಬೇಕು. ಜೊತೆಗೆ ತಮ್ಮ ಮಕ್ಕಳನ್ನು ಮೊಬೈಲ್ ಗಳಿಂದ ದೂರವಿಡುವಂತೆ ಮಾಡಬೇಕು. ಆಗಿದ್ದಾಂಗೆ ತಮ್ಮ ಮಕ್ಕಳಿಗೆ ಬುದ್ದಿ ಹೇಳುತ್ತಿರಬೇಕೆಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರವೀಂದ್ರ ಪೋಷಕರಿಗೆ ಸಲಹೆ ನೀಡಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (Mobile Addiction)ನಡೆದ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಸಮಾಲೋಚನಾ ಪಾಲಕ ಪೋಷಕರ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಬಹು ಪ್ರಮುಖ ಘಟ್ಟ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳಿಸುವಲ್ಲಿ ಉಪನ್ಯಾಸಕರಷ್ಟೇ ಅಲ್ಲದೆ ಪಾಲಕರ ಪಾತ್ರ ಪ್ರಮುಖವಾಗಿದೆ. ಮಗುವಿನ ಕಲಿಕೆಯಲ್ಲಿ ಕಲಿಸುವವರ ಮತ್ತು ಮಗುವನ್ನು (Mobile Addiction)ಪೋಷಿಸುವವರ ಸಹಸಂಬಂಧಗಳು ತುಂಬಾ ಮುಖ್ಯವಾದದ್ದು. ಇವರಿಬ್ಬರೂ ಕೂಡಿಯೇ ಮಗುವಿನ ಶಿಕ್ಷಣದ ತೇರನ್ನು ಎಳೆಯಬೇಕು. ಮಗು ಶಾಲೆಯಲ್ಲಿ ಏನು ಮಾಡುತ್ತಿದೆ? ಏನು ಕಲಿಯುತ್ತಿದೆ? ಎಂಬುದರ ಮಾಹಿತಿ ಪೋಷಕರಿಗೆ ಹಾಗೂ ಮನೆಯಲ್ಲಿ ಮಗು ಎಷ್ಟು ಓದುತ್ತಿದೆ? ಏನು ಓದುತ್ತಿದೆ? ಎದುರಿಸುತ್ತಿರುವ ಸಮಸ್ಯೆಗಳೇನು? ಎಂಬುದರ ಸತತ ಮಾಹಿತಿ ಶಿಕ್ಷಕರಿಗೆ ಬೇಕಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ಉಪನ್ಯಾಸಕ ಡಿ.ಮೋಹನ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿ ಸಾಧಿಸಬೇಕಾದರೆ ಪೋಷಕರು ಹಾಗೂ ಉಪನ್ಯಾಸಕರ ನಡುವೆ ಉತ್ತಮ ಬಾಂಧವ್ಯವಿರಬೇಕು. ಮಕ್ಕಳ ಚಲನವಲನಗಳ ಬಗ್ಗೆ ಸದಾ ಎಚ್ಚರ ವಹಿಸಿ ತಮ್ಮ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಮೊಬೈಲ್, ಸ್ಮಾರ್ಟ್ ವಾಚ್‌ಗಳ ಬಳಕೆ ಕಡಿಮೆ ಮಾಡಿದರೆ ಕಲಿಕೆಯ ಕಡೆಗೆ ಗಮನ ಕೊಡಲು ಅನುಕೂಲವಾಗುತ್ತದೆ ಎಂದರು.
ನಂತರ ಅರ್ಥಶಾಸ್ತ್ರ ಉಪನ್ಯಾಸಕರಾದ ಆರ್. ಜಿ. ಸೋಮಶೇಖರ್ ಮಾತನಾಡಿ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸ ಹೆತ್ತವರಿಂದ ಆಗಬೇಕು. ತಮ್ಮ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುವ ಅವಶ್ಯಕತೆ ಇದೆ. ಮಕ್ಕಳ ಸುರಕ್ಷತೆಯ ಬಗ್ಗೆ ಮತ್ತು ಯಾವುದೇ ದುಶ್ಚಟಗಳಿಗೆ ಬಲಿಯಾಗದಂತೆ ಪ್ರತಿಯೊಬ್ಬ ಪೋಷಕರು ಎಚ್ಚೆತ್ತುಕೊಳ್ಳಬೇಕು. ಇದಕ್ಕಾಗಿ ಪೋಷಕರ ಸ್ಪಂದನೆ ಅತೀ ಅಗತ್ಯ. ಪೋಷಕರು ಹಾಗೂ ಉಪನ್ಯಾಸಕರ ಕೊಂಡಿ ಗಟ್ಟಿಯಾಗಿದ್ದರೆ ಮಕ್ಕಳ ಯಶಸ್ಸು ಸಾಧ್ಯ ಎಂದು ಹೇಳಿದರು.
ಸಭೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಕಲಿಕಾ ಪ್ರಕ್ರಿಯೆಯನ್ನು ವಿಶ್ಲೇಷಿಸಲಾಯಿತು, ಮಗುವಿನ ಮಾನಸಿಕ ಬೆಳವಣಿಗೆ ಕುರಿತು ಚರ್ಚಿಸುವ ಜೊತೆಗೆ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ನೀಡುವ ಮತ್ತು ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರೇರೇಪಣೆ ಮಾಡಲಾಯಿತು.
ಈ ಸಮಾರಂಭದಲ್ಲಿ ಪೋಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕ ಮೆಹಬೂಬ್ ಖಾನ್, ಗಣಿತ ಉಪನ್ಯಾಸಕ ಕೆ.ವರದರಾಜನ್, ಸಮಾಜ ಶಾಸ್ತ್ರ ಉಪನ್ಯಾಸಕ ನರೇಶ್, ವ್ಯವಹಾರ ಅಧ್ಯಯನ ಉಪನ್ಯಾಸಕ ರಾಮಾಂಜಿನಪ್ಪ, ಲೆಕ್ಕಶಾಸ್ತ್ರ ಉಪನ್ಯಾಸಕ ಅನಂತ್ ಕುಮಾರ್, ಇಂಗ್ಲಿಷ್ ಉಪನ್ಯಾಸಕ ಅನಿಲ್ ಕುಮಾರ್, ಬೋಧಕೇತರ ಸಿಬ್ಬಂದಿ ವೀಣಾಕುಮಾರಿ, ಮದುಸೂದನ್, ಜಯಮ್ಮ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.