ಗುಡಿಬಂಡೆ: ನಾವು ನಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಇದ್ದೇವೆ ಎಂದರೆ ಅದಕ್ಕೆ ಮುಖ್ಯ ಕಾರಣ ದೇಶದ ಗಡಿಯಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಕಾವಲು ಕಾಯುತ್ತಿರುವ ನಮ್ಮ ಸೈನಿಕರು ತಮ್ಮ ಮನೆ, ಪರಿವಾರವನ್ನು ಬಿಟ್ಟು ದೇಶವೇ ತಮ್ಮ ಮನೆ ಎನ್ನುವಂತೆ ಕಾವಲು ಕಾಯುವ ವೀರ ಯೋಧರ ಸಾಹಸ ಮತ್ತು ಪರಾಕ್ರಮ ಅವಿಸ್ಮರಣೀಯ ಎಂದು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ನಾಯಕರಾದ ಆರ್.ಮಿಥುನ್ ರೆಡ್ಡಿ ಅವರು ತಿಳಿಸಿದರು.
ಪಟ್ಟಣದ ಗಜನಾಣ್ಯ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಭಜರಂಗದಳ ವತಿಯಿಂದ ಬಜರಂಗದಳ ಸೇವಾ ಸಪ್ತಾಹ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಭಾರತೀಯ ವೀರ ಯೋಧರ ಸ್ಮರಣಾರ್ಥವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ (Health Camp) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು ದೇಶ, ರಾಜ್ಯ, ಸಂಸ್ಕೃತಿ, ಭಾಷೆ ವಿಚಾರಕ್ಕೆ ಬಂದಾಗ ನಾವು ಮುಂದೆ ಇರಬೇಕು. ಗುಡಿಬಂಡೆಯಲ್ಲಿಯೂ ಸ್ವಾತಂತ್ರ್ಯ ಹೋರಾಟಗಾರರು, ವೀರ ಯೋಧರ ಇದ್ದಾರೆ, ಪ್ರಸ್ತುತ ಕೆಲವರು ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಅವರೆಲ್ಲರಿಗೂ ಈ ಕಾರ್ಗಿಲ್ ವಿಜಯ ದಿವಸದ ಶುಭಾಶಯಗಳನ್ನು ತಿಳಿಸಿದರು.
ಯೋಧರ ಸೇವೆ ರಾಮಾಯಣ, ಮಹಾಭಾರತದ ಗ್ರಂಥಗಳಂತೆ ಶಾಶ್ವತವಾಗಿ ಈ ದೇಶದ ಇತಿಹಾಸ ಪುಟಗಳಲ್ಲಿ ಉಳಿಯುತ್ತದೆ. ಇಂತಹ ದೇಶಾಭಿಮಾನದ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿರುವುದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಎಲ್ಲರೂ ಈ ಆರೋಗ್ಯ ಶಿಬಿರದ ಉಪಯೋಗ ಪಡೆಯಬೇಕು. ನಾವು ಗುಡಿಬಂಡೆ, ಬಾಗೇಪಲ್ಲಿ ಮತ್ತು ಚೇಳೂರು ತಾಲ್ಲೂಕುಗಳನ್ನು ಕ್ಷಯ ರೋಗ ಮುಕ್ತ ತಾಲ್ಲೂಕು ಮಾಡಲು ಆರೋಗ್ಯ ಇಲಾಖೆ ಜೊತೆಗೆ ಪ್ರಯತ್ನ ಮಾಡಿದ್ದೇವು. ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಪ್ರಶಂಸೆ ಪತ್ರವನ್ನು ಕಳುಹಿಸಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ರಾಜ್ಯ ನೇಕಾರರ ಪ್ರಕೋಷ್ಠದ ಸಹ ಸಂಚಾಲ ಗಜನಾಣ್ಯ ನಾಗರಾಜ್, ಚಿಕ್ಕಬಳ್ಳಾಪುರ ಬಿಜೆಪಿ ನಗರ ಅಧ್ಯಕ್ಷ ಆನಂದ್, ವಿಶ್ವ ಹಿಂದೂ ಪರಿಷದ್ ವಿಭಾಗ ಸಂಘಟನಾ ಕಾರ್ಯದರ್ಶಿ ಸಾಗರ್ ಜಿ, ಭಜರಂಗದಳ ಕೋಲಾರ ವಿಭಾಗ ಸಂಚಾಲಕ ನರೇಶ್ ರೆಡ್ಡಿ, ವಿಎಚ್’ಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ, ಭಜರಂಗದಳ ಜಿಲ್ಲಾ ಸಂಚಾಲಕ ಜಿ.ಎ ಅಮರೇಶ್, ತಾಲ್ಲೂಕು ಅಧ್ಯಕ್ಷ ಶ್ರೀನಾಥ್, ಬಜರಂಗದಳದ ಮನೋಜ್, ಲೋಕೇಶ್, ಗಗನ್, ಉಲ್ಲೋಡು ಗ್ರಾಮ ಪಂಚಾಯತಿ ಹಿರಿಯ ಮುಖಂಡ ಪ್ರಹ್ಲಾದರಾವ್, ಭಜರಂಗದಳದ ಹರೀಶ್, ಶ್ರೀನಿವಾಸ್ ರೆಡ್ಡಿ, ಬಿಜೆಪಿ ಪದ್ಮಾವತಿ, ವರ್ಲಕೊಂಡ ಸಂತೋಷ್, ಮಣಿಕುಮಾರ್ ಸೇರಿದಂತೆ ಹಲವರಿದ್ದರು.