ಇತ್ತೀಚಿಗೆ ಆನ್ ಲೈನ್ ಆಪ್ ಗಳ ಆರ್ಭಟ ಜೋರಾಗಿದೆ ಎಂದೇ ಹೇಳಬಹುದು. ಅದರಲ್ಲೂ ಹೂಡಿಕೆ ಮಾಡುವಂತಹ ಅನೇಕ ಆಪ್ ಗಳು ರಾಶಿ ರಾಶಿಯಾಗಿ ಸಿಗುತ್ತವೆ. ಈ ಆಪ್ ಗಳ ಪೈಕಿ ಕೆಲವೊಂದು ಟ್ರಸ್ಟೆಡ್ ಆಪ್ ಗಳಾಗಿದ್ದರೇ, ಮತ್ತೇ ಕೆಲವು ಫೇಕ್ ಅಂದರೇ ಜನರಿಗೆ ಮೋಸ ಮಾಡುವಂತಹ ಆಪ್ ಗಳೂ ಸಹ ಇದೆ. ಇದೀಗ ಆನ್ ಲೈನ್ ಆಫ್ ನಲ್ಲಿ ಹಣ ಹೂಡಿಕೆ ಮಾಡಿದ ಬೆಂಗಳೂರಿನ ಮಹಾರಾಣಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬಳು ನಷ್ಟ ಅನುಭವಿಸಿದ್ದು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಬೆಂಗಳೂರಿನ ಮಹಾರಾಣಿ ವಿವಿಯ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಪಾವನಾ (19) ಎಂಬ ವಿದ್ಯಾರ್ಥಿ ಮೃತ ದುರ್ದೈವಿ ಎಂದು ಗುರ್ತಿಸಲಾಗಿದೆ. ಮೃತ ಪಾವನಾ ಪ್ರಥಮ ವರ್ಷದ ಬಿಎಸ್.ಸಿ ವ್ಯಾಸಂಗ ಮಾಡುತ್ತಿದ್ದಳು. ಮಹಾರಾಣಿ ವಿವಿಯ ಹಾಸ್ಟಲ್ ರೂಮ್ 17 ರಲ್ಲಿ ಆಕೆಯ ನೇಣಿಗೆ ಶರಣಾಗಿದ್ದಾಳೆ. ಅಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದ್ದು, ಅದರಲ್ಲಿ ಆನ್ ಲೈನ್ ಆಪ್ ನಲ್ಲಿ 15 ಸಾವಿರ ಹೂಡಿಕೆ ಮಾಡಿದ್ದಾಗಿ ಉಲ್ಲೇಖಿಸಿದ್ದಾಳೆ ಎಂದು ಹೇಳಲಾಗಿದೆ. ಆನ್ ಲೈನ್ ನಲ್ಲಿ 15 ಸಾವಿರ ಹೂಡಿಕೆ ಮಾಡಿ ನಷ್ಟ ಅನುಭವಿಸಿದ್ದಾಳೆ, ಈ ಹಣವನ್ನು ಆಕೆ ತನ್ನ ಸ್ನೇಹಿತರ ಬಳಿ ಸಾಲ ಮಾಡಿದ್ದಾಳೆ 10 ಸಾವಿರ ಹಣ ಹೊಂದಿಸಿದ್ದು, ಉಳಿದ 5 ಸಾವಿರ ಹಣ ಹೊಂದಿಸಲು ಆಗದೇ ಚಿಂತೆಗೆ ಒಳಗಾಗಿದ್ದಳಂತೆ. ಸಾಲ ತೀರಿಸಲು ಆಗದೇ ಆತಂಕಗೊಂಡ ಪಾವನಾ ಕಳೆದ ಭಾನುವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನೂ ಜೂನ್.16 ರಂದು ರಾತ್ರಿ 11.30 ರ ಸಮಯದಲ್ಲಿ ಪಾವನಾ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಸಮಯದಲ್ಲಿ ಜೋರಾಗಿ ಚೇರ್ ಬಿದ್ದ ಶಬ್ದ ಕೇಳಿಬಂದಿದೆ. ಶಬ್ದ ಕೇಳಿದ ಕೂಡಲೇ ಪಕ್ಕದ ರೂಮ್ ಗಳಲ್ಲಿದ್ದ ವಿದ್ಯಾರ್ಥಿನಿಯರು ಬಂದು ನೋಡಿದಾಗ ಆಕೆ ನೇಣಿಗೆ ಶರಣಾಗಿರುವುದು ತಿಳಿದಿದೆ. ಕೂಡಲೇ ಮೃತಳ ಗೆಳತಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.