ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಇಷ್ಟೂ ದಿನಗಳ ಕಾಲ ಬಂಧನದ ಭೀತಿಯಿಂದ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದರು. ಕಳೆದೆರಡು ದಿನಗಳ ಹಿಂದೆಯಷ್ಟೆ ಪ್ರಜ್ವಲ್ ತಾನು ಮೇ.31 ರಂದು ಬಂದು ಎಸ್.ಐ.ಟಿ. ಅಧಿಕಾರಿಗಳ ವಿಚಾರಣೆಗೆ ಒಳಗಾಗುವುದಾಗಿ ವಿಡಿಯೋ ಮೂಲಕ ತಿಳಿಸಿದ್ದರು. ಅದರಂತೆ ಇದೀಗ ಪ್ರಜ್ವಲ್ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಎರಡು ಟ್ರಾಲಿ ಬ್ಯಾಗ್ ಗಳ ಜೊತೆಗೆ ಚೆಕ್ ಇನ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಕ್ ನಿಂದ ಭಾರತಕ್ಕೆ ಬರಲಿದ್ದಾರೆ. ಪ್ರಜ್ವಲ್ ಬುಕ್ ಮಾಡಿರುವ ಟಿಕೆಟ್ ಪ್ರಕಾರ ಅವರು ಮೇ.31 ರ ಮಧ್ಯರಾತ್ರಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಸದ್ಯ ಮ್ಯೂನಿಕ್ ವಿಮಾನದ ನಿಲ್ದಾಣದಲ್ಲಿ ಚೆಕ್ ಇನ್ ಆದ ಪ್ರಜ್ವಲ್ ಈ ಭಾರಿ ಪಕ್ಕಾ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಸಹ ಪ್ರಜ್ವಲ್ ರೇವಣ್ಣ ಎರಡು ಮೂರು ಬಾರಿ ಭಾರತಕ್ಕೆ ಬರುವುದಾಗಿ ಕೈ ಕೊಟ್ಟಿದ್ದರು. ಇದೀಗ ಪ್ರಜ್ವಲ್ ರೇವಣ್ಣ ಭಾರತಕ್ಕೆ ಬರೋದು ಖಚಿತ ಎಂದೇ ಹೇಳಲಾಗುತ್ತಿದೆ. ಈಗಾಗಲೇ ಪ್ರಜ್ವಲ್ 6 ಬಾರಿ ಟಿಕೆಟ್ ಬುಕ್ ಮಾಡಿದ್ದರು. 5 ಬಾರಿ ಕ್ಯಾನ್ಸಲ್ ಮಾಡಿದ್ದರು. 35 ದಿನಗಳ ಬಳಿಕ ಪ್ರಜ್ವಲ್ ಭಾರತಕ್ಕೆ ಬರಲಿದ್ದು, ಅವರು ಬಂದ ಕೂಡಲೇ ಎಸ್.ಐ.ಟಿ. ಅಧಿಕಾರಿಗಳು ಬಂಧನ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಸಂಸದ ಪ್ರಜ್ವಲ್ ರೇವಣ್ಣ ಲುಫ್ತನ್ಸಾ ವಿಮಾನದಲ್ಲಿ 3 ಲಕ್ಷ ರೂ. ಖರ್ಚು ಮಾಡಿ ಬಿಸಿನೆಸ್ ದರ್ಜೆಯ ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತಿದ್ದಾರೆ. ಒಟ್ಟು 23 ಬಿಸಿನೆಸ್ ದರ್ಜೆಯ ಟಿಕೆಟ್ ಪೈಕಿ 8 ಮಂದಿ ಮಾತ್ರ ಬುಕ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಒಬ್ಬಂಟಿಯಾಗಿ ವಿಂಡೋ ಸೀಟ್‌ನಲ್ಲಿ ಕುಳಿತಿದ್ದಾರೆ. ಭಾರತೀಯ ಕಾಲಮಾನದಂತೆ ಸಂಜೆ 4:20ಕ್ಕೆ ವಿಮಾನ ಟೇಕಾಫ್ ಆಗಿದ್ದು ಮಧ್ಯರಾತ್ರಿ 1:05 ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗಲಿದೆ ಎಂದು ತಿಳಿದುಬಂದಿದೆ. ಈಗಾಗಲೇ ಎಸ್‌ಐಟಿ ತಂಡ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದು, ಪ್ರಜ್ವಲ್ ಚೆಕ್ ಔಟ್ ಆಗುತ್ತಿದ್ದಂತೆ ಅವರನ್ನು ಬಂಧಿಸಲು ಕಾದು ಕುಳಿತಿದ್ದಾರೆ.