ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಅಪರಾಧ ಪ್ರಕರಣಗಳ ವಿರುದ್ದ ವಿರೋಧ ಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಚನ್ನಗಿರಿ ಪೊಲೀಸ್ ಠಾಣೆ ಧ್ವಂಸ ಹಾಗೂ ಉಡುಪಿ ಗ್ಯಾಂಗ್ ವಾರ್ ಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸರ್ಕಾರದ ವಿರುದ್ದ ಪ್ರತಿಪಕ್ಷ ನಾಯಕರುಗಳು ಟೀಕಾ ಪ್ರಹಾರ ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವರಾದ ಅಶ್ವಥ್ ನಾರಾಯಣ, ಪ್ರಹ್ಲಾದ ಜೋಷಿ, ಸುನೀಲ್ ಕುಮಾರ್ ರವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಸರ್ಕಾರವನ್ನು ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ. ಕಾಂಗ್ರೇಸ್ ಕೈಗೆ ಅಧಿಕಾರ ಕೊಟ್ಟರೇ ರೌಡಿಗಳ ಕೈಯಲ್ಲಿ ಲಾಂಗು, ಮಚ್ಚು, ಉಗ್ರರ ಕೈಯಲ್ಲಿ ಬಾಂಬು ಕೊಟ್ಟಂತೆ, ಶಾಂತಿ, ಸುವ್ಯವಸ್ಥೆ, ಕಾನೂನು ಪರಿಪಾಲನೆ ಹೆಸರುವಾಸಿಯಾಗಿರುವ ಕರ್ನಾಟಕ ಕಾಂಗ್ರೇಸ್ ಸರ್ಕಾರದ ಆಡಳಿತ ರೌಡಿ ಆಡಳಿತವಾಗಿ ಬದಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದ ಬಳಿಕ, ರೌಡಿಶೀಟರ್ ಗಳು, ಕೊಲೆಗಡುಕರು, ಬಾಂಬು, ಲಾಂಗ್, ಮಚ್ಚು, ಭಯೋತ್ಪಾದಕರು ಹೀಗೆ ಎಲ್ಲವೂ ಅಶಾಂತಿಯ ವಾತಾವರಣ ಸೃಷ್ಟಿಸಿದ್ದಾರೆ. ಉಡುಪಿಯಲ್ಲಿ ನಡುರಸ್ತೆಯಲ್ಲಿ ಗ್ಯಾಂಗ್ ವಾರ್, ಚನ್ನಗಿರಿಯ ಪೊಲೀಸ್ ಠಾಣೆಯ ಧ್ವಂಸ ಇವೆಲ್ಲಾ ಘಟನೆಗಳನ್ನು ನೋಡುತ್ತಿದ್ದರೆ, ರಾಜ್ಯದಲ್ಲಿ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ಸಹ ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಹತ್ಯೆಗಳು, ಅತ್ಯಾಚಾರಗಳು, ಗಾಂಜಾ ಮಾರಾಟ, ರೇವ್ ಪಾರ್ಟಿಗಳು, ಕೋಮುಗಲಬೆಗಳಿಂದ ಕರ್ನಾಟಕದ ಗೌರವ ಮಣ್ಣು ಪಾಲಾಗುತ್ತಿದೆ. ನಿಮ್ಮ ಕೈಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಆಗದೇ ಇದ್ದರೇ ರಾಜಿನಾಮೆ ಕೊಟ್ಟು ಸೀದಾ ಮನೆಗೆ ಹೋಗಿ, ಕನ್ನಡಿಗರು ನೆಮ್ಮದಿಯಿಂದ ಬದುಕೋಕೆ ಬಿಡಿ ಎಂದು ಟೀಕೆ ಮಾಡಿದ್ದಾರೆ.
ಇನ್ನೂ ಮಾಜಿ ಸಿಎಂ ಕುಮಾರಸ್ವಾಮಿ ರಾಜ್ಯ ಕಾಂಗ್ರೇಸ್ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ಯಾರೂ ಗೌರವ ಕೊಡುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ಗೌರವವಿಲ್ಲ. ಏಕೆಂದರೆ ಪೊಲೀಸ್ ಅಧಿಕಾರಿಗಳನ್ನು ಬೇರೆ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿತವಾಗಿದೆ. ಇದು ಸರ್ಕಾರದ ಸ್ವಯಂಕೃತ ಅಪರಾಧವಾಗಿದೆ. ಅಷ್ಟೇಅಲ್ಲದೇ ಈ ಸರ್ಕಾರದ ಬಗ್ಗೆ ಅಧಿಕಾರಿಗಳಲ್ಲಿಯೂ ವಿಶ್ವಾಸವಿಲ್ಲ. ಜನತೆಯಲ್ಲೂ ವಿಶ್ವಾಸವಿಲ್ಲ ಎಂದು ಟೀಕಿಸಿದ್ದಾರೆ.
ಇನ್ನೂ ಮಾಜಿ ಡಿಸಿಎಂ ಅಶ್ವತ್ಥನಾರಾಯಣ ಸಹ ಕಿಡಿಕಾರಿದ್ದಾರೆ. ರಾಜ್ಯದ ಜನ ಕಾಂಗ್ರೇಸ್ ನವರಿಗೆ ಅಧಿಕಾರ ಕೊಟ್ಟರೂ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪೊಲೀಸ್ ವರ್ಗಾವಣೆಯಲ್ಲಿ ಹಸ್ತಕ್ಷೇಪ ನಡೆಯುತ್ತಿದೆ. ಅವರ ಪಾಪದ ಕೊಡ ತುಂಬಿದೆ. ಅಧಿಕಾರ ದುರ್ಬಳಕೆ, ನಮ್ಮ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಸಹ ಹೆಚ್ಚಾಗಿದೆ. ಎಲ್ಲವನ್ನೂ ರಾಜ್ಯಪಾಲರ ಗಮನಕ್ಕೆ ತರುತ್ತೇವೆ. ಸರ್ಕಾರದ ವಿರುದ್ದ ಚಾಟಿ ಬೀಸುವಂತೆ ಮನವಿ ಮಾಡುತ್ತೇವೆ, ಜೊತೆಗೆ ಸರ್ಕಾರ ವಜಾ ಮಾಡುವಂತೆ ಆಗ್ರಹಿಸುತ್ತೇವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನೂ ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿಕೆ ನೀಡಿದ್ದು, ಸಣ್ಣ ಕಾರಣಕ್ಕೆ ಶಾಸಕರನ್ನು ಬಂಧಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂಧಿಸುವ ಗಂಡೆದೆ ಇಲ್ಲವೇ. ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಹೊಡೆದಾಡಿಕೊಂಡಿದ್ದಾರೆ. ಸರ್ಕಾರದಲ್ಲಿ ಕ್ರಿಮಿನಲ್ ಗಳಿಗೆ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ ಎಂದು ಕಿಡಿಕಾರಿದ್ದಾರೆ.