Love Dhoka – ಇಡೀ ದೇಶಾದ್ಯಂತ ಸುದ್ದಿಯಾಗಿದ್ದ ಶರೋನ್ ರಾಜ್ ಕೊಲೆ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ವಿಷ ಹಾಕಿ ಕೊಂದಿದ್ದ ಪ್ರೇಯಸಿ ಗ್ರೀಷ್ಮಾಗೆ ಕೇರಳದ ನ್ಯಾಯಾಲಯವು ಮರಣದಂಡನೆ ಶಿಕ್ಷೆ ವಿಧಿಸಿದೆ. ಕಳೆದ 2022 ರಲ್ಲಿ ಪಾನೀಯದಲ್ಲಿ ವಿಷ ಬೆರೆಸಿ ಬಾಯ್‌ಫ್ರೆಂಡ್ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕೇರಳದ ಗ್ರೀಷ್ಮಾಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಜ.17 ರಂದು ಆರೋಪಿ ಗ್ರೀಷ್ಮಾ ಕೊಲೆಯ ಅಪರಾಧಿಯೆಂದು ಸಾಬೀತಾಗಿದ್ದು, ಇದೀಗ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆಯ ಪ್ರಮಾಣ ಪ್ರಕಟವಾಗಿದೆ.

ಕೇರಳ ಮೂಲದ ಶರೋನ್ ರಾಜ್ ಹಾಗೂ ಗ್ರೀಷ್ಮಾ ಇಬ್ಬರೂ ಪ್ರೀತಿಸಿಕೊಳ್ಳುತ್ತಿದ್ದರು. ಕೇರಳದ ತಿರುವನಂತಪುರಂ ಜಿಲ್ಲೆಯ ಪರಸ್ಸಲ ಮೂಲದ ಶರೋನ್ ರಾಜ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ರೇಡಿಯಾಲಜಿ ವಿದ್ಯಾರ್ಥಿನಿಯಾಗಿದ್ದ. ಇಬ್ಬರೂ ಒಂದು ವರ್ಷಕ್ಕೂ ಹೆಚ್ಚು ಕಾಲ ನಿಕಟ ಸಂಬಂಧ ಹೊಂದಿದ್ದರು. ಗ್ರೀಷ್ಮಾ ಅವರ ಕುಟುಂಬವು ಕೇರಳದ ಇನ್ನೊಬ್ಬ ವ್ಯಕ್ತಿಯೊಂದಿಗೆ ಆಕೆಯ ವಿವಾಹವನ್ನು ನಿಗದಿಪಡಿಸಿದ್ದರಿಂದ ಶರೋನ್ ಜೊತೆಗಿನ ಸಂಬಂಧ ಅಂತ್ಯಗೊಳಿಸಲು ನಿರ್ಧಾರ ಮಾಡಿದ್ದಳು. ನಾಗರಕೋಯಿಲ್‌ನ ಸೇನಾ ಸಿಬ್ಬಂದಿಯೊಂದಿಗೆ ಗ್ರೀಷ್ಮಾಳ ವಿವಾಹವನ್ನು ನಿಶ್ಚಯಿಸಲಾಗಿತ್ತು. ಆದ್ದರಿಂದ ಶರೋನ್ ರಾಜ್ ನನ್ನು ತನ್ನ ಜೀವನದಿಂದ ದೂರವಿಡಲು ಪ್ರಯತ್ನಿಸಿದ್ದಳು. ಇದಕ್ಕೆ ಶರೋನ್ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡ ಗ್ರೀಷ್ಮಾ ಆತನ ಕೊಲೆಗೆ ಸಂಚು ರೂಪಿಸಿದ್ದಳು ಎಂದು ತಿಳಿದುಬಂದಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ತಿರುವನಂತಪುರದ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯ, ಶರೋನ್ ರಾಜ್ ಹತ್ಯೆ ಕೇಸ್‌ನಲ್ಲಿ ಆರೋಪಿ ಗ್ರೀಷ್ಮಾಹಾಗೂ ಆಕೆ ಚಿಕ್ಕಪ್ಪ ನಿರ್ಮಲ ಕುಮಾರನ್ ನಾಯರ್ ಅವರನ್ನು ದೋಷಿಗಳೆಂದು ಹೇಳಿದೆ. ತನ್ನ 586 ಪುಟಗಳ ತೀರ್ಪಿನಲ್ಲಿ, ಅಪರಾಧದ ಗಂಭೀರತೆಯನ್ನು ಪರಿಗಣಿಸಿ ಅಪರಾಧಿಯ ವಯಸ್ಸನ್ನು ಪರಿಗಣಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಗ್ರೀಷ್ಮಾ ಅವರ ತಾಯಿ ಪ್ರಕರಣದ 2ನೇ ಆರೋಪಿಯನ್ನು ಕೋರ್ಟ್ ಖುಲಾಸೆಗೊಳಿಸಿದೆ. 24 ವರ್ಷದ ಅಪರಾಧಿ ಗ್ರೀಷ್ಮಾ ಮರಣದಂಡನೆ ಶಿಕ್ಷೆ ಅನುಭವಿಸಿದ ಭಾರತದ ಅತ್ಯಂತ ಕಿರಿಯ ಯುವತಿಯಾಗಿದ್ದಾಳೆ.
ಕಳೆದ 2022 ರಲ್ಲಿ ಅಪರಾಧಿ ಗ್ರೀಷ್ಮಾ ಮೃತ ಶರೋನ್ ಜೊತೆಗೆ ಲೈಂಗಿಕ ಸಂಬಂಧ ಹೊಂದಲು ಬಯುಸುತ್ತಿರುವುದಾಗಿ ಹೇಳಿ ಆತನನ್ನು ಮನೆಗೆ ಕರೆಸಿಕೊಂಡಿದ್ದಳು. ಬಳಿಕ ಆತನಿಗೆ ವಿಷ ಬೆರೆಸಿದ ಜ್ಯೂಸ್ ನೀಡಿದ್ದಳು. ಈ ಜ್ಯೂಸ್ ಕುಡಿದ ಬಳಿಕ ಶರೋನ್ ಆರೋಗ್ಯ ಹದಗೆಟ್ಟಿತ್ತು. ಆಕೆ ಜ್ಯೂಸ್ ನಲ್ಲಿ ಆರ್ಯುವೇದಿಕ್ ಕೀಟನಾಶಕ ಬಳಸಿದ್ದರಿಂದ ತನ್ನ ಈ ಪಾಪದ ಕೃತ್ಯ ಯಾರಿಗೂ ಗೊತ್ತಾಗುವುದಿಲ್ಲ ಎಂದು ಊಹೆ ಮಾಡಿದ್ದಳು. ವಿಷಪೂರಿತ ಜ್ಯೂಸ್ ಕುಡಿದ ಶರೋನ್ 11 ದಿನಗಳ ಕಾಲ ಆಸ್ಪತ್ರೆಯಲ್ಲಿ ನರಕಯಾತನೆ ಅನುಭವಿಸಿದ್ದರು. ಬಹುಅಂಗಾಗ ವೈಫಲ್ಯದಿಂದ ಅವರು ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ಸಂಬಂಧಿಕರಲ್ಲಿ ತನ್ನ ಪ್ರೇಯಸಿ ಗ್ರೀಷ್ಮಾ ವಿಷ ಹಾಕಿದ್ದಾಗಿ ಹೇಳಿದ್ದ. ಪೊಲೀಸ್ ವಿಚಾರಣೆ ವೇಳೆ ಶರೋನ್ ಗೆ ವಿಷ ಹಾಕಿದ್ದಾಗಿ ಗ್ರೀಷ್ಮಾ ಒಪ್ಪಿಕೊಂಡಿದ್ದಳು.