Bisiyuta Yojane – ಪ್ರತಿಯೊಬ್ಬ ಮಗುವಿಗೂ ಮದ್ಯಾಹ್ನದ ವೇಳೆ ಸರ್ಕಾರ ಬಿಸಿಯೂಟ ಯೋಜನೆಯನ್ನು ಜಾರಿ ಮಾಡಿದ್ದು, ಈ ಯೋಜನೆಯಡಿ ಶಾಲೆಗಳಿಗೆ ಆಹಾರಧಾನ್ಯಗಳನ್ನು ಪೂರೈಕೆ ಮಾಡಲಾಗುತ್ತದೆ. ಆದರೆ ಚಿಕ್ಕಬಳ್ಳಾಪುರದ ಗುಡಿಬಂಡೆ ತಾಲೂಕಿನ ವ್ಯಾಪ್ತಿಯ ಹಲವು ಶಾಲೆಗಳಿಗೆ ನೀಡಿದ ತೊಗರಿ ಬೇಳೆಯಲ್ಲಿ ಹುಳುಗಳು ಕಂಡು ಬಂದಿದ್ದು, ಕಳಪೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿರುವ ಪೂರೈಕೆದಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಸರ್ಕಾರದ ಮಹತ್ತರ ಯೋಜನೆಗಳಲ್ಲಿ ಬಿಸಿಯೂಟ ಯೋಜನೆ ಒಂದಾಗಿದೆ. ದೂರದ ಊರುಗಳಿಂದ ಸರ್ಕಾರಿ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಮದ್ಯಾಹ್ನದ ಊಟ ಸಿಗಬೇಕೆಂಬ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಆದರೆ ಗುಡಿಬಂಡೆ ತಾಲೂಕಿನ ಕೆಲವೊಂದು ಶಾಲೆಗಳಿಗೆ ನೀಡಿದಂತಹ ತೊಗರಿ ಬೇಳೆ ಕಳಪೆಯಾಗಿದ್ದು, ಅದರಲ್ಲಿ ಹುಳುಗಳು ಮಿಶ್ರಿತವಾಗಿದೆ. ಜೊತೆಗೆ ಬೇಳೆ ಸಹ ತುಂಬಾ ಕಳಪೆಯಾಗಿದೆ. ಈ ಬೇಳೆಯನ್ನೇ ಬಳಸಿ ಮದ್ಯಾಹ್ನದ ಬಿಸಿಯೂಟದಲ್ಲಿ ಸಾಂಬಾರ್ ಮಾಡಲಾಗುತ್ತಿದೆ. ಹುಳುಗಳನ್ನು ಆರಿಸಿ ಸಾಂಬಾರ್ ಮಾಡುತ್ತಿದ್ದರೂ ಕೆಲವು ವಿದ್ಯಾರ್ಥಿಗಳು ಊಟ ಸವಿಯಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಈ ಕುರಿತು ಶಾಲೆಗಳ ಅಡುಗೆಯವರನ್ನು ವಿಚಾರಿಸಿದರೇ ನಮಗೆ ಶಿಕ್ಷಕರು ನೀಡುವ ಆಹಾರ ಪದಾರ್ಥಗಳನ್ನು ಬಳಸಿಯೇ ಊಟ ತಯಾರಿಸುತ್ತೇವೆ. ನಾವು ಎಲ್ಲಾ ಆಹಾರ ಧಾನ್ಯಗಳನ್ನು ಸ್ವಚ್ಚಗೊಳಿಸಿ ಅಡುಗೆ ಮಾಡುತ್ತೇವೆ ಎಂದಿದ್ದಾರೆ. ಈ ಸಂಬಂಧ ಶಾಲೆಗಳ ಮುಖ್ಯ ಶಿಕ್ಷಕರನ್ನು ಕೇಳಿದರೇ, ನಮಗೆ ಪೂರೈಕೆ ಮಾಡಿದ ಆಹಾರ ಧಾನ್ಯಗಳು ಮೂಟೆಗಳಲ್ಲಿ ತಂದು ಹಾಕುತ್ತಾರೆ. ಎಲ್ಲಾ ಆಹಾರ ಧಾನ್ಯಗಳನ್ನು ಪರೀಕ್ಷೆ ಮಾಡಲು ಆಗುವುದಿಲ್ಲ. ತೊಗರಿ ಬೇಳೆ ಪೂರೈಕೆ ಮಾಡಿದಾಗಲೇ ಹುಳುಗಳು ಮಿಶ್ರಣವಾಗಿರುವ ತೊಗರಿ ಬಂದಿದೆ. ಹುಳುಗಳನ್ನು ಆರಿಸಲು ಬೇಳೆಯನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರವೇ ಅಡುಗೆ ಮಾಡಲು ನೀಡಲಾಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಮೇಲಾಧಿಕಾರಿಗಳಿಗೂ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.
ಕೋಟ್ಯಂತರ ಹಣ ವೆಚ್ಚ ಮಾಡಿ ಬಡವರು ಸೇರಿದಂತೆ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಮದ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಲಾಗಿದೆ. ಆದರೆ ಹಣದ ಆಸೆಗಾಗಿ ಪೂರೈಕೆ ಮಾಡುವಂತಹವರು ಕಳಪೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಮಕ್ಕಳಿಗೆ ನೀಡುವ ಆಹಾರದಲ್ಲೂ ಹಣ ಹೊಡೆಯಲು ಈ ರೀತಿಯ ಕೆಲಸಕ್ಕೆ ಮುಂದಾಗಿದ್ದಾರೆ. ಕೂಡಲೇ ಪೂರೈಕೆದಾರರ ವಿರುದ್ದ ಕಠಿಣ ಕ್ರಮ ತೆಗೆದುಕೊಂಡು ಮಕ್ಕಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡಬೇಕೆಂದು ಪೋಷಕರು ಆಗ್ರಹಿಸಿದ್ದಾರೆ. ಇನ್ನೂ ಕಳಪೆ ಗುಣಮಟ್ಟದ ಆಹಾರ ಧಾನ್ಯಗಳಿಂದ ತಯಾರಿಸಿದ ಊಟ ಸೇವಿಸಿ ಮಕ್ಕಳಿಗೆ ಏನಾದರೂ ಅನಾಹುತ ಸಂಭವಿಸಿದರೇ ಯಾರು ಹೊಣೆ ಎಂಬ ಪ್ರಶ್ನೆ ಸಹ ಉದ್ಬವಿಸಿದ್ದು, ಅನಾಹುತ ನಡೆಯುವುದಕ್ಕೂ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಕೋಟ್-1 : ಕಳಪೆ ಆಹಾರ ಧಾನ್ಯಗಳ ಪೂರೈಕೆ ಬಗ್ಗೆ ದೂರು ಬಂದಿದ್ದು, ಈ ಕುರಿತು ಮೇಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ ಪತ್ರ ಬರೆದು ಬದಲಿ ಆಹಾರ ಧಾನ್ಯ ವಿತರಣೆ ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. – ಕ್ಷೇತ್ರ ಶಿಕ್ಷಣಾಧಿಕಾರಿ, ಕೃಷ್ಣಪ್ಪ