ಇಂದಿನ ತಂತ್ರಜ್ಞಾನ ಯುಗದಲ್ಲಿ ಅನೇಕರು ಯೂಟ್ಯೂಬ್ ನಲ್ಲಿ ವಿಡಿಯೋಗಳನ್ನು ನೋಡಿ ಫಾಲೋ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ತಂತ್ರಜ್ಞಾನ, ಅಡುಗೆ, ಆಟಿಕೆಗಳ ತಯಾರಿಕೆ ಹೀಗೆ ಅನೇಕ ವಿಚಾರಗಳು ಯುಟ್ಯೂಬ್ ನಲ್ಲಿ ವಿಡಿಯೋಗಳ ಮೂಲಕ ಸಿಗುತ್ತದೆ. ಇದೀಗ ಅದೇ ವೈದ್ಯನೋರ್ವ ಯುಟ್ಯೂಬ್ ವಿಡಿಯೋ (Youtube Doctor Operation) ನೋಡಿ ಬಾಲಕನೋರ್ವನಿಗೆ ಆಪರೇಷನ್ ಮಾಡಿದ್ದಾನೆ. ಈ ನಕಲಿ ವೈದ್ಯ ಸರ್ಜರಿ ಮಾಡಿದ ಪರಿಣಾಮ 17 ವರ್ಷ ಬಾಲಕನೋರ್ವ ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಯೂಟ್ಯೂಬ್ ವಿಡಿಯೋ ನೋಡಿ ಬಿಹಾರದ ನಕಲಿ ವೈದ್ಯ ಬಾಲಕನಿಗೆ ಅಪರೇಷನ್ ಮಾಡಿದ್ದಾನೆ. ಬಾಲಕನ ಪಿತ್ತಕೋಶದಲ್ಲಿರುವ ಕಲ್ಲನ್ನು ತೆಗೆಯುವುದಕ್ಕೆ ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಿದಂತೆ ಆಪರೇಷನ್ ಮಾಡಿದ್ದಾರೆ. ಆದರೆ ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಬಾಲಕನನ್ನು ಪಾಟ್ನಾದ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಬಾಲಕ ಮೃತಪಟ್ಟಿದ್ದಾನೆ. ಇದು ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿಯೇ ಬಾಲಕನ ಮೃತದೇಹವನ್ನು ಬಿಟ್ಟು ನಕಲಿ ವೈದ್ಯ ಹಾಗೂ ಜೊತೆಗಿದ್ದವರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವೈದ್ಯ ಹಾಗೂ ಪರಾರಿಯಾಗಿರುವವರ ಪತ್ತೆಗಾಗಿ ಶೋಧ ಶುರು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಬಾಲಕ ಪದೇ ಪದೇ ವಾಂತಿ ಮಾಡುತ್ತಿದ್ದರಿಂದ ಆತನನ್ನು ಸರನ್ ಎಂಬ ನಗರದಲ್ಲಿರುವ ಗಣಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ವಾಂತಿ ನಿಂತಿತ್ತು. ಅಲ್ಲಿನ ವೈದ್ಯ ಅಜಿತ್ ಕುಮಾರ್ ಪುರಿ ಬಾಲಕನಿಗೆ ಆಪರೇಷನ್ ಅಗತ್ಯವಿದೆ ಎಂದು ಹೇಳಿದ್ದ. ಆದರೆ ಆ ವೈದ್ಯ ಯೂಟ್ಯೂಬ್ ನೋಡಿ ಆಪರೇಷನ್ ಮಾಡಿದ್ದರಿಂದ ನನ್ನ ಮಗ ಪ್ರಾಣ ಕಳೆದುಕೊಂಡ ಎಂದು ಮೃತ ಬಾಲಕ ತಂದೆ ಚಂದನ್ ಶಾ ತಿಳಿಸಿದ್ದಾರೆ. ಇನ್ನೂ ಬಾಲಕನ ತಾತ ಮಾತನಾಡಿ ಬಾಲಕನ ತಂದೆ ಬೇರೆ ಕೆಲಸ ಮೇರೆಗೆ ಹೊರಗೆ ಹೋಗಿದ್ದರು. ಆದರೆ ಕುಟುಂಬದವರ ಅನುಮತಿ ಪಡೆಯದೇ ಬಾಲಕನನ್ನು ಕರೆದುಕೊಂಡು ಹೋಗಿ ಆಪರೇಷನ್ ಮಾಡಿದ್ದಾರೆ. ಬಾಲಕ ಜೋರಾಗಿ ಕಿರುಚಾಡಿದ ಏನು ಅಂತಾ ಕೇಳಿದ್ರೆ ನಮ್ಮ ಮೇಲೆಯೇ ಜೋರು ಮಾಡಿದರು. ಬಳಿಕ ಸಂಜೆಯ ವೇಳೆಗೆ ಬಾಲಕನ ಶವವನ್ನು ಆಸ್ಪತ್ರೆಯ ಮೆಟ್ಟಿಲಲ್ಲಿ ಇಟ್ಟು ಪರಾರಿಯಾಗಿದ್ದಾರೆ ಎಂದು ನೋವು ತೋಡಿಕೊಂಡರು.