ವಾಟ್ಸಪ್‌ನಲ್ಲಿ (WhatsApp) ಬಂದಿದ್ದ ಮದುವೆ ಕಾರ್ಡ್ ನೋಡಿ ಖುಷಿಯಿಂದ ಕ್ಲಿಕ್ ಮಾಡಿದ ಸರ್ಕಾರಿ ನೌಕರರೊಬ್ಬರು, ಕ್ಷಣಾರ್ಧದಲ್ಲೇ ₹1.90 ಲಕ್ಷ ಕಳೆದುಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ. ಆಹ್ವಾನದ ಸೋಗಿನಲ್ಲಿ ಬಂದ ಈ ಫೈಲ್, ವಾಸ್ತವದಲ್ಲಿ ಸೈಬರ್ ವಂಚಕರ (Cyber crime) ಬಲೆ ಎಂಬುದೀಗ ಬೆಳಕಿಗೆ ಬಂದಿದೆ. ಈ ಘಟನೆ ಡಿಜಿಟಲ್ ಜಗತ್ತಿನಲ್ಲಿ ನಾವು ಎಷ್ಟರ ಮಟ್ಟಿಗೆ ಎಚ್ಚರದಿಂದ ಇರಬೇಕು ಎಂಬುದಕ್ಕೆ ಮತ್ತೊಂದು ನಿದರ್ಶನವಾಗಿದೆ.
WhatsApp – ನಡೆದಿದ್ದೇನು?
ಆಗಸ್ಟ್ 20ರಂದು ಸರ್ಕಾರಿ ನೌಕರರೊಬ್ಬರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ ಸಂದೇಶ ಬಂದಿತ್ತು. ಅದರಲ್ಲಿ, “ಆಗಸ್ಟ್ 30, 2025ರಂದು ಮದುವೆಗೆ ತಪ್ಪದೇ ಬರಬೇಕು. ಪ್ರೀತಿಯು ಸಂತೋಷದ ದ್ವಾರವನ್ನು ತೆರೆಯುವ ಕೀಲಿ ಕೈಯಾಗಿದೆ” ಎಂದು ಬರೆದಿದ್ದರು. ಇದರ ಜೊತೆಗೆ, ಒಂದು ಪಿಡಿಎಫ್ (PDF) ಫೈಲ್ ಅನ್ನು ಸಹ ಲಗತ್ತಿಸಿದ್ದರು. ನೌಕರ ಈ ಫೈಲ್ ಅನ್ನು ಓಪನ್ ಮಾಡಿದ ತಕ್ಷಣವೇ, ಅವರ ಬ್ಯಾಂಕ್ ಖಾತೆಯಿಂದ ₹1,90,000 ಹಣವನ್ನು ವಂಚಕರು ವರ್ಗಾಯಿಸಿಕೊಂಡಿದ್ದಾರೆ. ಈ ಸಂಬಂಧ ನೌಕರ ಹಿಂಗೋಲಿ ಪೊಲೀಸ್ ಠಾಣೆ ಮತ್ತು ಸೈಬರ್ ಸೆಲ್ ಇಲಾಖೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
WhatsApp – ಹ್ಯಾಕ್ ಆಗಿದ್ದು ಹೇಗೆ?
ಪೊಲೀಸ್ ತನಿಖೆಯ ಪ್ರಕಾರ, ಸೈಬರ್ ವಂಚಕರು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್ ಅನ್ನು ಕಳುಹಿಸಿದ್ದರು ಎಂದು ತಿಳಿದುಬಂದಿದೆ. ಈ ಎಪಿಕೆ ಫೈಲ್ ಅನ್ನು ಒಮ್ಮೆ ಕ್ಲಿಕ್ ಮಾಡಿದರೆ, ಅದು ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿ ಫೋನ್ ಹ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ, ವಂಚಕರು ಮೊಬೈಲ್‌ನಲ್ಲಿನ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಲು ಮತ್ತು ಡೇಟಾವನ್ನು ಕದಿಯಲು ಸಾಧ್ಯವಾಗಿದೆ. ಇದೇ ರೀತಿ ಹಿಮಾಚಲ ಪ್ರದೇಶದಲ್ಲೂ ಸೈಬರ್ ಪೊಲೀಸರು ಅಪರಿಚಿತ ಮೂಲಗಳಿಂದ ಬಂದ ಫೈಲ್‌ಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಿದ್ದರು. Read this also : ವಾಟ್ಸಾಪ್ ಬಳಕೆದಾರರೇ ಎಚ್ಚರ! ಹೊಸ ಆನ್‌ಲೈನ್ ಸ್ಕ್ಯಾಮ್: ಎಪಿಕೆ ಫೈಲ್‌ಗಳಿಂದ ನಿಮ್ಮ ಹಣಕ್ಕೆ ಕನ್ನ…!
WhatsApp – ಸೈಬರ್ ವಂಚನೆ ತಪ್ಪಿಸುವುದು ಹೇಗೆ?
- ಅಪರಿಚಿತ ಸಂದೇಶ ನಿರ್ಲಕ್ಷಿಸಿ: ನಿಮಗೆ ಪರಿಚಯವಿಲ್ಲದ ನಂಬರ್‌ಗಳಿಂದ ಬಂದ ಸಂದೇಶ, ಲಿಂಕ್ ಅಥವಾ ಫೈಲ್‌ಗಳನ್ನು ತೆರೆಯಬೇಡಿ.
- ಎಪಿಕೆ ಫೈಲ್ ಬಗ್ಗೆ ಎಚ್ಚರ: ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಯಾಕೇಜ್ (APK) ಫೈಲ್‌ಗಳು ಹೆಚ್ಚಾಗಿ ಹ್ಯಾಕಿಂಗ್‌ಗೆ ಕಾರಣವಾಗುತ್ತವೆ. ಅವುಗಳನ್ನು ಡೌನ್‌ಲೋಡ್ ಮಾಡದಂತೆ ಎಚ್ಚರ ವಹಿಸಿ.
- ವೈಯಕ್ತಿಕ ಮಾಹಿತಿ ಹಂಚಬೇಡಿ: ಬ್ಯಾಂಕ್ ಖಾತೆ ವಿವರ, ಪಾಸ್‌ವರ್ಡ್, ಒಟಿಪಿ ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ನೀಡಬೇಡಿ.
ಇಂತಹ ವಂಚನೆಗೆ ಒಳಗಾದಾಗ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆ ಅಥವಾ ಸೈಬರ್ ಸೆಲ್ ಇಲಾಖೆಗೆ ದೂರು ನೀಡಿ