ಗುಡಿಬಂಡೆ: ನಾಡಪ್ರಭು ಕೆಂಪೇಗೌಡರು ನೀರಾವರಿ ಯೋಜನೆ ಸೇರಿದಂತೆ ದೂರದೃಷ್ಟಿ ಯೋಜನೆಗಳನ್ನು ರೂಪಿಸಿ, ನಗರ ನಿರ್ಮಾಣದ ಮಾದರಿಯನ್ನು ಸುಮಾರು ವರ್ಷಗಳ ಹಿಂದೆಯೆ ಅನುಷ್ಟಾನಗೊಳಿಸಿದಂತಹ ಮುಂದಾಲೋಚನೆ ಹಾಗೂ ಆಡಳಿತ ತತ್ವಗಳು ಇಂದಿನ ರಾಜಕೀಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ ಹಾಗೂ ಬೈರೇಗೌಡ ವಕ್ಕಲಿಗರ ಸಂಘದ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 515ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿದೆ, ಕೆಂಪೇಗೌಡರ ಹೆಸರು ವಿಶ್ವದ ಎಲ್ಲೆಡೆ ತಿಳಿಯುವಂತೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದು, ಜೊತೆಗೆ ಪ್ರತಿಮೆ ನಿರ್ಮಾಣ ಮಾಡಿದ್ದು ಉತ್ತಮ ನಿರ್ಧಾರ ಹಾಗಾಗಿ ಅಂತಹ ನಿರ್ಧಾರ ಮಾಡಿದ ಅಂದಿನ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮುಂದಿನ 20 ತಿಂಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು. ತಾಪಂ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ ಎಂದ ಅವರು, ಕೆಎಸ್ಆರ್ಟಿಸಿ ಬಸ್ ಘಟಕ ನಿರ್ಮಾಣ ಮಾಡುವ ಬಗ್ಗೆ ಸರಕಾರದ ಹಂತದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುವ ಬಗ್ಗೆ ಕ್ರಮ ಜರುಗಿಸಲಾಗುವುದು. ಪಟ್ಟಣದ ಅಭಿವೃದ್ಧಿಗಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ತಿಳಿಸಿದರು. ಒಕ್ಕಲಿಗರ ಸಮುದಾಯ ಭವನಕ್ಕೆ 10 ಲಕ್ಷ ಹಣ ಮಂಜೂರು, ಗುಡಿಬಂಡೆ ಪಟ್ಟಣದ ಮುಖ್ಯದ್ವಾರಕ್ಕೆ ಹಾವಳಿ ಬೈರೇಗೌಡರ ಹೆಬ್ಬಾಗಿಲು ಎಂದು ನಾಮಕರಣ ಮಾಡಲಾಗುವುದು ಹಾಗೂ ತ್ವರಿತವಾಗಿ ಹೆಬ್ಬಾಗಿಲು ನಿರ್ಮಾಣಕ್ಕೆ ಅನುದಾನ ಕಲ್ಪಿಸುತ್ತೇನೆ ಎಂದರು.
ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ನ್ಯೂ ವಿಜನ್ ಶಾಲೆಯ ಮುಖ್ಯ ಶಿಕ್ಷಕಿ ಡಿ.ಎಲ್. ಪರಿಮಳ ಮಾತನಾಡಿ ಕೆಂಪೇಗೌಡರು ತಮ್ಮ ಕಾಲದಲ್ಲಿ ಅಭಿವೃದ್ಧಿಯಲ್ಲಿ ಸಾಧನೆಗಳ ಶಿಖರವನ್ನೇ ನಿರ್ಮಿಸಿದ್ದು, ಅವರ ಹಾದಿಯನ್ನು ನಾವು ಅನುಕರಣೆ ಮಾಡಬೇಕಿದ್ದು, ಬೆಂಗಳೂರು ನಿರ್ಮಿಸುವಾಗಲೇ ದೂರದೃಷ್ಟಿಯಾಗಿಸಿದ್ದಾರೆ. ಬೆಂಗಳೂರಿನಲ್ಲಿ ಕೆಂಪೇಗೌಡರು ವಿಶಾಲವಾದ ರಸ್ತೆಗಳನ್ನು ನಿರ್ಮಿಸಿದರು. ಇದಲ್ಲದೇ ನಾಲ್ಕು ಕಡೆಯೂ ಗೋಪುರಗಳನ್ನು ಸ್ಥಾಪಿಸಿದರು. ಇದಷ್ಟೇ ಅಲ್ಲದೇ ಅಭಿವೃದ್ಧಿ ದೃಷ್ಟಿಯಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಸಾಕಷ್ಟು ಕೆರೆಗಳನ್ನು ನಿರ್ಮಿಸಿದರು. ಅವರ ಮುಂದಾಲೋಚನೆಯ ಫಲವಾಗಿ 16ನೇ ಶತಮಾನದಲ್ಲೇ ಬೆಂಗಳೂರು ಪಾಶ್ಚಾತ್ಯ ವ್ಯಾಪಾರಿಗಳ ಗಮನಸೆಳೆದಿತ್ತು. ಇಂದು ಬೆಂಗಳೂರು ಐಟಿ ಹಬ್‌ಆಗಿ ಗುರುತಿಸಿ ಕೊಂಡು ಬೆಳೆದು ನಿಂತಿದೆಯೆಂದರೆ ಅದಕ್ಕೆ ಕೆಂಪೇಗೌಡರು, ಹೊಂದಿದ್ದ ದೂರದೃಷ್ಟಿಯೇ ಕಾರಣವೆಂದರು. ಅದ್ಭುತ ಆಡಳಿತಗಾರರಾಗಿದ್ದ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಿಸಿ ಅದನ್ನು ಚಿರಸ್ಥಾಯಿಯಾಗಿಸಿದ್ದಾರೆ ಎಂದರು.
ದೀಪಾಲಂಕಾರ ಮರೆತ ಅಧಿಕಾರಿಗಳು: ಪ್ರತಿಯೊಬ್ಬ ಮಹನೀಯರ ಜಯಂತಿಗಳಿಗೆ ದೀಪಾಲಂಕಾರ ಮಾಡಲಾಗುತ್ತದ. ಆದರೆ ಕೆಂಪೇಗೌಡರ ದಿನಾಚರಣೆ ಪ್ರಯುಕ್ತ ಸರ್ಕಾರಿ ಇಲಾಖೆಗಳು ತಮ್ಮ ಕಚೇರಿಗಳಿಗೆ ದೀಪಾಲಂಕಾರ ಮಾಡದೇ ಸಂಭಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಕೆಂಪೇಗೌಡರಿಗೆ ಅಪಮಾನ ಮಾಡಿದ್ದಾರೆಂದು ಸಮುದಾಯದ ಮುಖಂಡರು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎನ್.ಮನೀಷಾ, ತಾಪಂ ಇಒ ಹೇಮಾವತಿ, ಬಿಇಒ ಗೋವಿಂದಪ್ಪ, ತಾಲೂಕು ಬೈರೇಗೌಡರ ಒಕ್ಕಲಿಗರ ಸಂಘದ ಆಧ್ಯಕ್ಷ ಮಂಜುನಾಥ್ ರೆಡ್ಡಿ, ಉಪಾಧ್ಯಕ್ಷ ಆದಿರೆಡ್ಡಿ, ಗುಡಿಬಂಡೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಣೇಶ್, ಸಂಘದ ಪದಾಧಿಕಾರಿಗಳು ಸೇರಿದಂತೆ ಹಲವರಿದ್ದರು.