ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಿಸಿಲಿನ ಝಳ ಮುಂದುವರಿದಿದ್ದು ಹೈನುಗಾರಿಕೆಯನ್ನು ನಚ್ಚಿಕೊಂಡಿರುವವರು ಜಾನುವಾರುಗಳಿಗೆ ನೀರು ಹಾಗೂ ಮೇವಿಗೆ ಪರದಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಗದೇ ಮೌನ ವಹಿಸಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು ಕಳೆದೆರಡು ಮೂರು ವರ್ಷಗಳಿಂದ ಮಳೆ ಅಭಾವದಿಂದ ಬಯಲು ಪ್ರದೇಶದಲ್ಲಿ ಹಸಿರು ಮಾಯವಾಗಿದೆ. ಗಿಡಮರ ಹುಲ್ಲು ಒಣಗಿ ಗುಡ್ಡಗಾಡು ಪ್ರದೇಶ ಭಣಗುಡುತ್ತಿದೆ. ಬೆಟ್ಟಗಳಲ್ಲಿ ನೀರು ಆಹಾರ ನೆರಳಿನ ಆಶ್ರಯಕ್ಕಾಗಿ ಜಾನುವಾರು ಪರದಾಡುತ್ತಿವೆ. ಇದರ ನಡುವೆ ಜಾನುವಾರುಗಳ ಬಾಯಾರಿಕೆಗೆಂದು ನಿರ್ಮಿಸಿರುವ ತೊಟ್ಟಿಗಳು ನಿರ್ವಹಣೆ ಕೊರತೆಯಿಂದ ಯೋಜನೆ ಹಳ್ಳ ಹಿಡಿದಂತಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಈ ಬಾರಿ ಜಿಲ್ಲೆಯ ಬಹುಪಾಲು ಕೆರೆ ಕಟ್ಟೆಗಳು ಬರದಾಗಿವೆ. ಪರಿಣಾಮ ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ (ಮಹಾತ್ಮ ಗಾಂಧಿ ನರೇಗ) ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಗತ್ಯವಿರುವೆಡೆ ತೊಟ್ಟಿ ನಿರ್ಮಿಸಿ ಜಾನುವಾರಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಜಾನುವಾರು ಸಾಕಣೆ ದುಬಾರಿ ವೆಚ್ಚ: ಮುಂಗಾರು – ಹಿಂಗಾರು ಮಳೆ ನಿರೀಕ್ಷೆಯಂತೆ ಸುರಿದಿಲ್ಲ. ಬಿಸಿಲಿನ ಪ್ರಕರತೆಯಿಂದ ಅಂತರ್ಜಲ ಮಟ್ಟ ಕುಸಿದಿದೆ. ಹಳ್ಳ-ಕೊಳ್ಳ, ಕೆರೆಗಳು ಬಾಯ್ತರೆದಿದೆ. ಮೇವಿಗೆ ಬರ ಶುರುವಾಗಿದೆ. ಮೇವು ಕೇಂದ್ರ ಕೇಳಿಕೊಂಡು ಸರಕಾರಿ ಕಚೇರಿಗಳಿಗೆ ರೈತರು ಅಲೆದಾಡುತ್ತಿದ್ದಾರೆ. ಕಂದಾಯ ಇಲಾಖೆ, ಪಶು ಸಂಗೋಪನಾ ಇಲಾಖೆ ಇತ್ತ ಗಮನಹರಿಸುತ್ತಿಲ್ಲ ಅನಿವಾರ್ಯವಾಗಿ ರೈತರು ನೆರೆಯ ಜಿಲ್ಲೆಗಳಿಂದ ದುಬಾರಿ ಮಚ್ಚದಲ್ಲಿ ಮೇವು ಖರೀದಿಸಿ ಜಾನುವಾರು ರಕ್ಷಣೆಗೆ ರೈತರು ಮುಂದಾಗಿದ್ದಾರೆ. ಇದರ ನಡುವೆ ತಾಲೂಕು ಆಡಳಿತ ಮಾತ್ರ ಮೇವು ಕೇಂದ್ರ ಸ್ಥಾವನೆಯತ್ತ ಗಮನಹರಿಸುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ.
ನೀರಿನ ತೊಟ್ಟಿ ಕಣ್ಮರೆ: ನರೇಗಾ ಯೋಜನೆಯಡಿ ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗಿದೆ, ಆದರೆ ಅವುಗಳಲ್ಲಿ ನೀರನ್ನು ತುಂಬಿಸುವ ಕೆಲಸವನ್ನು ಮಾತ್ರ ಮಾಡಿಲ್ಲ, ಜಾನುವಾರುಗಳಿಗಾಗಿ ನಿರ್ಮಿಸಿರುವ ತೊಟ್ಟಿಗಳಲ್ಲಿ ನೀರು ತುಂಬಿಸಿದರೆ ಜಾನುವಾರುಗಳ ದಾಹ ನೀಗಿಸಬಹುದಾಗಿದೆ ಆದರೆ ಅಧಿಕಾರಿಗಳು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಳೆದ ಎರಡು ಮೂರು ವರ್ಷಗಳಿಂದ ಬೇಸಿಗೆ ಮೊದಲೇ ಕಂದಾಯ, ಪಶು ಸಂಗೋಪನೆ ಹಾಗೂ ಅರಣ್ಯ ಇಲಾಖೆಯಿಂದ ಬೆಟ್ಟ ಗುಡ್ಡ, ಅರಣ್ಯ ಪ್ರದೇಶಗಳಲ್ಲಿ ಪಕ್ಷಿಗಳ ದಾಹ ನೀಗಿಸಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಚುನಾವಣೆ ಕಾರ್ಯದೋತ್ತಡದಿಂದ ಈ ಯೋಜನೆಯನ್ನು ಮರೆತು ಹೋಗಿದ್ದಾರೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಹೈನುಗಾರಿಕೆಯನ್ನು ಜಿಲ್ಲೆಯ ರೈತರು ಉಪ ಕಸುಬನ್ನಾಗಿ ನಿರ್ವಹಣೆ ಮಾಡುತ್ತಿದ್ದು, ಬರದಿಂದ ತತ್ತರಿಸಿರುವ ರೈತರು ಮೇವು ಕೊರತೆಯಿಂದ ತಮ್ಮ ಜಾನುವಾರುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಬರ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳ ನಡೆಯನ್ನು ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ ಎಂದು ರೈತರು ಅಗ್ರಹಿಸಿದ್ದಾರೆ. ಜಿಲ್ಲೆಯ ಎಲ್ಲೆಡೆ ನೀರಿಲ್ಲದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ಸಾಕಷ್ಟು ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ಜಾನುವಾರುಗಳಿಗೆ ನೀರಿನ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಒಂದು ತೊಟ್ಟಿಗೆ ಕ್ರಮವಾಗಿ 42 ಸಾವಿರ ರೂ. ವೆಚ್ಚ ಮಾಡಲಾಗಿದೆ. 5 ಮೀ. ಉದ್ದ .1.7 ಮೀ. ಅಗಲವುಳ್ಳ ವಿಸ್ತೀರ್ಣದಲ್ಲಿ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಲಾಗಿದೆ.
ನಿರ್ಮಾಣಗೊಂಡಿರುವ ಜಾನುವಾರುಗಳ ತೊಟ್ಟಿಗಳ ನಿರ್ವಹಣೆ ಪೂರ್ಣ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ನಿಗದಿತ ವೇಳೆಗೆ ತೊಟ್ಟಿಯನ್ನು ಶುಚಿಗೊಳಿಸಿ ಜಾನುವಾರುಗಳಿಗೆ ಯೋಗ್ಯ ನೀರು ಪೂರೈಕೆಗೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ. ತೊಟ್ಟಿಗಳ ಕಾಮಗಾರಿ ಮಾಡಿರುವ ಕಡೆಗಳಲ್ಲಿ ಕಡ್ಡಾಯವಾಗಿ ನಾಮಫಲಕ ಅಳವಡಿಸಿ ಇದನ್ನು ಜಾನುವಾರಗಳ ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಬೇ 9 ಬೇರೆ ಉದ್ದೇಶಕ್ಕೆ ಬಳಸದಂತೆ ಎಚ್ಚರಿಕೆ ವಹಿಸುವಂತೆ ಗ್ರಾಪಂಗಳಿಗೆ ಸೂಚಿಸಲಾಗಿದೆ ಆದರೆ ಈ ನಿಯಮಗಳು ಕೇವಲ ಕಾಗದಕ್ಕಷ್ಟೇ ಸೀಮಿತ ವಾಗಿದೆ.
ತಾಲ್ಲೂಕಿನಲ್ಲಿ 3ಕ್ಕೂ ಅಧಿಕ ಹಸು, ಎಮ್ಮೆಗಳಿದ್ದರೆ, 40 ಸಾವಿರಕ್ಕೂ ಅಧಿಕ ಕುರಿ ಮೇಕೆಗಳಿವೆ ಎಂದು ಮಾಹಿತಿ ನೀಡಿದ್ದಾರೆ. ‘ಈ ಬಾರಿ ಬರಗಾಲ ಅವರಿಸಿದ್ದು ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ತೊಟ್ಟಿಗಳ ನೈರ್ಮಲ್ಯ ಕಾಪಾಡಬೇಕಿದೆ. ಪಾಚಿ ಕಟ್ಟದಂತೆ ನಿರ್ವಹಣೆ ಮಾಡಿ ಶುದ್ಧ ನೀರು ಸಂಗ್ರಹಿಸಲು ಪಿಡಿಒಗಳಿಗೆ ಪತ್ರ ಬರೆಯಲಾಗುವುದು’ ಎಂದು ತಾಲೂಕು ಪಂಚಾಯತಿ ಇಒ ಹೇಮಾವತಿ ತಿಳಿಸಿದರು.